Foundation and University publication

ಈ ಸಂಚಿಕೆಯು ಕೋವಿಡ್-19 ಪಿಡುಗಿನ ಮೇಲೆ ಗಮನ ಹರಿಸುತ್ತದೆ. ಸೋಂಕು ವಿಜ್ಞಾನಿಗಳು ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಬಳಸುವ ಕಾರ್ಯತಂತ್ರಗಳೇನು? ಈ ಮುಂದಿನ ಅಂಶಗಳನ್ನು ಪರಿಶೋಧಿಸಲು ‘ಮೂಲಾಂಶಗಳು’ ವಿಭಾಗವನ್ನು ಓದಿರಿ: ವೈರಾಣು, ಜೀವರಾಶಿಯ ಅತ್ಯಂತ ಸಂಕೀರ್ಣ ಅಥವಾ ಸರಳ  ಸ್ವರೂಪವೇ? ಇಪ್ಪತ್ತನೇ ಶತಮಾನದಿಂದ ಈಚೆಗೆ ಜೂನೊಸಿಸ್ ಗಳ (ಪ್ರಾಣಿಗಳಿಂದ ಮನುಷ್ಯನಿಗೆ ಹಾರುವ ರೋಗಾಣುಗಳಿಂದ ಹರಡುವ ಕಾಯಿಲೆ) ಸಂಖ್ಯೆಯು ಏಕೆ ಹೆಚ್ಚಾಗಿದೆ? ‘ಸೋಂಕು’ ವಿಭಾಗದಲ್ಲಿ - ಸಾರ್ಸ್-ಕೋವಿ-2 ಪ್ರಾಕೃತಿಕ ವಿಕಾಸದ ಪರಿಣಾಮ ಎಂದು ನಾವು ಏಕೆ ನಂಬುತ್ತೇವೆ? ಚಾಲ್ತಿಯಲ್ಲಿರುವ ಪಿಡುಗಿನ ಸಂದರ್ಭದಲ್ಲಿ ಸಂಭವಿಸುವ ಸಾವಿನ ಪ್ರಮಾಣದ ಲೆಕ್ಕಾಚಾರಗಳು ಎಷ್ಟರ ಮಟ್ಟಿಗೆ ಸರಿ? ಅಥವಾ,  ಜನರ ನಡುವೆ ನಡೆಯುವ ಸಾಮಾಜಿಕ ಒಡನಾಟಗಲ ಸ್ವರೂಪ ಮತ್ತು ಸಂದರ್ಭಗಳು ಕೋವಿಡ್-19ರ ಹರಡುವಿಕೆಯ ಮೇಲೆ ಯಾವ ರೀತಿಯ ಪರಿಣಾಮವನ್ನುಂಟು ಮಾಡುತ್ತವೆ? - ಮುಂತಾದ ಪ್ರಶ್ನೆಗಳೊಂದಿಗೆ ತೊಡಗಿಸಿಕೊಳ್ಳಿ. ‘ನಮ್ಮ ಪ್ರತಿಕ್ರಿಯೆ’ ವಿಭಾಗದಲ್ಲಿ ಈ ವಿಷಯಗಳ ಬಗ್ಗೆ ಓದಿ: ಸಾರ್ಸ್-ಕೋವಿ-2ಕ್ಕೆ ವ್ಯಾಕ್ಸೀನ್ ಗಳನ್ನು ಕಂಡುಹಿಡಿಯುವುದು ಮತ್ತು ತಯಾರಿಸುವುದು ಒಂದು ಅನಿಶ್ಚಿತ ಮತ್ತು ಸಮಯ ಹಿಡಿಯುವ ಪ್ರಕ್ರಿಯೆ, ಏಕೆ? ಒಪ್ಪಿಗೆ ಸೂಚಿಸಿರುವ, ಆರೋಗ್ಯವಂತ ವ್ಯಕ್ತಿಗಳನ್ನು ದುರ್ಬಲ ರೂಪದ ಸಾರ್ಸ್-ಕೋವಿ-2ರ ವೈರಾಣುವಿಗೆ ಉದ್ದೇಶಪೂರ್ವಕವಾಗಿ ತೆರೆದುಕೊಳ್ಳುವಂತೆ ಮಾಡುವುದರಿಂದ ನಾವು ಏನು ಕಲಿಯಬಹುದು? ಸಂಪರ್ಕ ಪತ್ತೆಗೆ ಮತ್ತು ವ್ಯಾಪಕ ನೆಲೆಯಲ್ಲಿ ಜನ ಸಮುದಾಯವನ್ನು ಪರೀಕ್ಷಿಸಲು ಯಾವ ರೀತಿಯ ಪರೀಕ್ಷೆಗಳು ಅತ್ಯಂತ ಪರಿಣಾಮಕಾರಿ? ಸಾರ್ಸ್-ಕೋವಿ-2ಕ್ಕೆ ವೈರಾಣು ನಿರೋಧಕಗಳನ್ನು ಹೇಗೆ ಪತ್ತೆ ಹಚ್ಚುತ್ತೇವೆ? ಪರೀಕ್ಷಾ ಕಿಟ್ ಗಳು ಇಲ್ಲದಿದ್ದರೂ, ಸಮುದಾಯ ಅರೋಗ್ಯ ಕಾರ್ಯಕರ್ತರು ಕೋವಿಡ್-19 ಕಾಯಿಲೆಯನ್ನು ವೈದ್ಯಕೀಯವಾಗಿ ಪತ್ತೆ ಹಚ್ಚಬಹುದೇ? ಪರಿಣಾಮಕಾರಿಯಾದ ಆರೋಗ್ಯ ಸೇವೆಯನ್ನು ಒದಗಿಸಲು, ಆಶಾ ಕಾರ್ಯಕರ್ತೆಯರಿಗೆ ತರಬೇತಿ ಮತ್ತು ವೈಯಕ್ತಿಕ ಸುರಕ್ಷತಾ ಸಲಕರಣೆಗಳನ್ನು ನೀಡುವುದು ಏಕೆ ಅವಶ್ಯಕವಾಗುತ್ತದೆ? ಹಿಮ್ಮುಖ ಕ್ವಾರಂಟೈನ್ ವಿಧಾನವು, ಸಾಮುದಾಯಿಕ ರೋಗ ನಿರೋಧಕ ಶಕ್ತಿಯನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಹೇಗೆ ಸಹಾಯ ಮಾಡುತ್ತದೆ? ಅಷ್ಟೇ ಅಲ್ಲ. ವಯೋವೃದ್ಧರು, ಮಕ್ಕಳು, ಮತ್ತು ಪ್ರತ್ಯೇಕ ವಾಸದಲ್ಲಿರುವವರ ಮಾನಸಿಕ ಆರೋಗ್ಯವನ್ನು ಕುರಿತಾಗಿ ಇರುವ ಕಾಳಜಿ ಮತ್ತು ವಿಧಾನಗಳ ಬಗೆಗಿನ ತಿಳುವಳಿಕೆಗಾಗಿ ಸಂಪನ್ಮೂಲಗಳನ್ನು ಅರಸುತ್ತಿದ್ದೀರಾ? ಅಥವಾ, ಸಾರ್ಸ್-ಕೋವಿ-2ರ ಸುತ್ತ ಹರಡಿರುವ ಮಿಥ್ಯೆಗಳಿಗೆ ಪ್ರತಿಯಾಗಿ ವೈಜ್ಞಾನಿಕ ಆಧಾರಗಳನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ, ನಾವು ಒದಗಿಸಿರುವ ‘ತುಣುಕು’ಗಳನ್ನು ನೋಡಿ.

January, 2021