ಅಜೀಂ ಪ್ರೇಮ್‌ಜಿ ಶಾಲೆ, ಕಲಬುರಗಿ

AzimPremjiSchool

ಕರ್ನಾಟಕದ ಕಲಬುರಗಿಯಲ್ಲಿರುವ ಅಜೀಂ ಪ್ರೇಮ್‌ಜಿ ಶಾಲೆಯು (ಸ್ಥಾಪನೆ: 2019), ನರ್ಸರಿ ಯಿಂದ 10ನೇ ತರಗತಿಯವರೆಗೆ ಉಚಿತ ಮತ್ತು ಉತ್ತಮ ಗುಣಮಟ್ಟದ ಇಂಗ್ಲಿಷ್-ಮಾಧ್ಯಮ ಶಿಕ್ಷಣವನ್ನು ನೀಡುತ್ತದೆ.

ಪಟ್ಟಣ್ ಕ್ರಾಸ್ ಬಳಿ ಇರುವ ಈ ಶಾಲೆಯು ಕರ್ನಾಟಕ ರಾಜ್ಯದ ಪಠ್ಯಕ್ರಮವನ್ನು ಅನುಸರಿಸುತ್ತದೆ. ಶಾಲೆಯು ಮಕ್ಕಳಿಗೆ ಮೂಲ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದಲ್ಲಿ ಉತ್ತಮ ಅಡಿಪಾಯ ಹಾಕುವುದರ ಮೇಲೆ ಗಮನ ಹರಿಸುವುದಲ್ಲದೆ, ಸುರಕ್ಷಿತ, ಸಮನ್ವಯ, ಭಯಮುಕ್ತ ಮತ್ತು ಸಂತೋಷದ ಕಲಿಕೆಯ ವಾತಾವರಣವನ್ನು ಪೋಷಿಸುತ್ತದೆ. ವಿವಿಧ ಆರ್ಥಿಕ ಹಾಗೂ ಧಾರ್ಮಿಕ ಹಿನ್ನೆಲೆಯ ಮಕ್ಕಳನ್ನು ಸ್ವಾಗತಿಸುವ ಈ ಶಾಲೆಯು ಸಮತೆ, ಸಾಮಾಜಿಕ ನ್ಯಾಯ ಮತ್ತು ಶಿಕ್ಷಣದ ಮೂಲಕ ನ್ಯಾಯಸಮ್ಮತ, ಮಾನವೀಯ ಮತ್ತು ಸುಸ್ಥಿರ ಸಮಾಜವನ್ನು ನಿರ್ಮಿಸಲು ಬದ್ಧವಾಗಿದೆ.

first-infrastructural facilities

ಮುಕ್ತ ಸಂವಹನ, ಅಭಿವ್ಯಕ್ತಿ ಸ್ವಾತಂತ್ರ್ಯ, ಜವಾಬ್ದಾರಿಯ ಹಂಚಿಕೆ ಮತ್ತು ಎಲ್ಲರ ಕುರಿತು ಆಳವಾದ ಗೌರವವನ್ನು ಬೆಳೆಸುವಂತಹ ವಾತಾವರಣದಲ್ಲಿ ಅರ್ಥಪೂರ್ಣ ಕಲಿಕೆಯು ಸಾಧ್ಯವಾಗುತ್ತದೆ ಎಂಬುದು ನಮ್ಮ ನಂಬಿಕೆ. ಇಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಬ್ಬರಿಗೂ ಭಯ, ಪಕ್ಷಪಾತ, ಪೂರ್ವಾಗ್ರಹ, ಅಥವಾ ಯಾವುದೇ ರೀತಿಯ ಸಾಮಾಜಿಕ ಅಡೆತಡೆಗಳಿಲ್ಲದ ಪರಿಸರವನ್ನು ಸೃಷ್ಟಿಸಲು ನಾವು ನಿರಂತರವಾಗಿ ಪ್ರಯತ್ನಿಸುತ್ತೇವೆ. ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ತರಗತಿಗಳಲ್ಲಿ ಶಿಕ್ಷಕ-ವಿದ್ಯಾರ್ಥಿ ಅನುಪಾತ 30:1 ಇದ್ದು, ಆರಂಭಿಕ ಬಾಲ್ಯ ಶಿಕ್ಷಣ (ECE) ತರಗತಿಗಳಲ್ಲಿ ಈ ಅನುಪಾತವು 15:1 ಇದೆ.

ಮಕ್ಕಳ ಕುರಿತು ನಮ್ಮ ನಂಬಿಕೆಗಳು

ಪ್ರತಿ ಮಗುವೂ ಕಲಿಯುವ ಸಾಮರ್ಥ್ಯ ಹೊಂದಿದ್ದು, ತನ್ನದೇ ಆದ ಕುತೂಹಲ, ವಿಶಿಷ್ಟವಾದ ಭಾಷಾ ಮತ್ತು ಸಾಂಸ್ಕೃತಿಕ ಸಾಮರ್ಥ್ಯಗಳನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ. ನಾವು ಮಕ್ಕಳನ್ನು ಗೌರವದಿಂದ ಕಂಡು, ಅವರು ಮುಖ್ಯ ಎಂಬ ಭಾವನೆ ಬರುವಂತೆ ಅವರನ್ನು ನಡೆಸಿಕೊಂಡು ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಿದಾಗ ಮಕ್ಕಳು ಪ್ರವರ್ಧಿಸುತ್ತಾರೆ. ಅವರು ಅನ್ವೇಷಣೆ, ಅನುಭವ, ಸಂವಾದ, ಚಲನೆ ಮತ್ತು ಸೃಜನಾತ್ಮಕ ಅಭಿವ್ಯಕ್ತಿಯ ಮೂಲಕ ವಿಭಿನ್ನ ಮಾರ್ಗಗಳಲ್ಲಿ ಜ್ಞಾನವನ್ನು ಗಳಿಸುತ್ತಾರೆ. ಬಹಳಷ್ಟು ಸಾರಿ ಅವರು ತಮ್ಮ ಸಹಪಾಠಿಗಳಿಂದಲೂ ಪರಿಣಾಮಕಾರಿಯಾಗಿ ಕಲಿಯುತ್ತಾರೆ. ಪ್ರತಿ ಮಗುವೂ ತನ್ನದೇ ವೇಗದಲ್ಲಿ ಕಲಿಯುತ್ತದೆ ಮತ್ತು ದೈಹಿಕ ಬೆಳವಣಿಗೆಯು ಭಾವನಾತ್ಮಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಬೆಂಬಲವಾಗಿರುತ್ತದೆ. ಮಕ್ಕಳು ವಿವಿಧ ಸಂದರ್ಭಗಳಿಗೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಮತ್ತು ಒಂದೇ ಮಗು ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ವರ್ತಿಸಬಹುದು ಎಂಬುದನ್ನೂ ನಾವು ಅರ್ಥಮಾಡಿಕೊಂಡಿದ್ದೇವೆ. ಇದು, ಬೋಧನೆ ಮತ್ತು ಕಲಿಕೆಯಲ್ಲಿ, ಒಂದು ನಮ್ಯ, ಪ್ರತಿಸ್ಪಂದನಾತ್ಮಕ ವಿಧಾನದ ಅಗತ್ಯತೆಯನ್ನು ತೋರಿಸುತ್ತದೆ.

ನಮ್ಮ ಶಾಲೆಯಲ್ಲಿನ ಬೋಧನಾ-ಕಲಿಕೆ ಪ್ರಕ್ರಿಯೆಗಳು

ತರಗತಿ ಬೋಧನೆ: ವಿದ್ಯಾರ್ಥಿಗಳನ್ನು ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೇಲೆ ಗಮನ ಹರಿಸುತ್ತದೆ. ಜೊತೆಗೆ, ಅವರು ಪ್ರಶ್ನಿಸಲು, ಅನ್ವೇಷಿಸಲು, ಕಲ್ಪಸಿಕೊಳ್ಳಲು, ಚರ್ಚಿಸಲು, ವಾದಿಸಲು ಮತ್ತು ಪರಿಕಲ್ಪನಾತ್ಮಕ ಸ್ಪಷ್ಟತೆ ಹಾಗೂ ಕಾರ್ಯವಿಧಾನದ ನೈಪುಣ್ಯವನ್ನು ರೂಪಿಸಿಕೊಳ್ಳಲು ಅನುವಾಗುವಂತಹ ಸೂಕ್ತ ಸವಾಲುಗಳನ್ನು ಒಡ್ಡುವುದರ ಮೇಲೂ ಗಮನ ಹರಿಸುತ್ತದೆ.

ಸೃಜನಾತ್ಮಕ ಅಭಿವ್ಯಕ್ತಿಗೆ ಪ್ರಾಮುಖ್ಯತೆ: ಕಲೆ, ಸಂಗೀತ, ದೈಹಿಕ ಶಿಕ್ಷಣ, ಕರಕೌಶಲ್ಯ ಮತ್ತು ಕ್ಲಬ್ ಚಟುವಟಿಕೆಗಳನ್ನು ಒಂದು ಸಮಗ್ರವಾದ ಶಿಕ್ಷಣದ ಅವಿಭಾಜ್ಯ ಅಂಗವೆಂದು ಪರಿಗಣಿಸಿ ಅವುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಇವುಗಳನ್ನು “ಪಠ್ಯೇತರ” ಅಥವಾ “ಐಚ್ಛಿಕ” ಕ್ಷೇತ್ರಗಳೆಂದು ಪರಿಗಣಿಸದೆ, ಅವು ಪ್ರತಿ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದವು ಎಂದು ಭಾವಿಸುತ್ತೇವೆ. ಕಲೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸೃಜನಶೀಲತೆ, ಭಾವನಾತ್ಮಕ ಅಭಿವ್ಯಕ್ತಿ, ಸಹಯೋಗ ಆತ್ಮವಿಶ್ವಾಸಗಳು ಬೆಳೆಯುದಲ್ಲದೆ ದೈಹಿಕ ಆರೋಗ್ಯ ಮತ್ತು ಮಾನಸಿಕ ಚೈತನ್ಯವೂ ಹೆಚ್ಚುತ್ತದೆ ಎಂಬುದು ನಮ್ಮ ನಂಬಿಕೆ.

ಸಹವರ್ತಿ ಮತ್ತು ಸಹಯೋಗದ ಕಲಿಕೆ: ಸಹವರ್ತಿ ಕಲಿಕೆಯು ವಿದ್ಯಾರ್ಥಿಗಳು ಪರಿಕಲ್ಪನೆಗಳನ್ನು ಒಬ್ಬರಿಗೊಬ್ಬರು ಸರಳ ಮತ್ತು ಅರ್ಥವಾಗುವ ರೀತಿಯಲ್ಲಿ ವಿವರಿಸಲು ಅವಕಾಶ ನೀಡುತ್ತದೆ. ಇದರಿಂದ ವಿವರಿಸುವ ಮತ್ತು ಕೇಳುವ ವಿದ್ಯಾರ್ಥಿಗಳಿಬ್ಬರೂ ಪರಿಕಲ್ಪನೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಸಹಯೋಗದ ಕಲಿಕೆಗೆ ಉತ್ತೇಜನ ನೀಡಲು, ವಿದ್ಯಾರ್ಥಿಗಳು ಪರಸ್ಪರ ಸಹಕಾರದಿಂದ ತಮ್ಮ ಕಲಿಕೆಯ ಪ್ರಯಾಣವನ್ನು ಬೆಂಬಲಿಸುವಂತಹ, ಪೈಪೋಟಿಗಿಂತ ಸಹಕಾರಕ್ಕೆ ಪ್ರಾಧಾನ್ಯ ನೀಡುವ ತರಗತಿ ಸಂಸ್ಕೃತಿಯನ್ನು ರೂಪಿಸುತ್ತೇವೆ. ಕಲಿಕೆಯು ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ; ಶಿಕ್ಷಕರು ಗೌರವಯುತ ಸಂವಾದಕ್ಕಾಗಿ ನಿಯಮಗಳನ್ನು ರೂಪಿಸುವ, ಗುಂಪಿನ ಕಾರ್ಯವಿಧಾನಗಳನ್ನು ಮಾರ್ಗದರ್ಶನ ಮಾಡುವ ಮತ್ತು ಪ್ರತಿಫಲನಾತ್ಮಕ ಅಭ್ಯಾಸವನ್ನು ಪ್ರೋತ್ಸಾಹಿಸುವ ಮೂಲಕ ಪರಸ್ಪರಕ್ರಿಯೆಗಳಿಗೆ ಅನುಕೂಲ ಮಾಡಿಕೊಡುತ್ತಾರೆ.

ಮಕ್ಕಳು ಶಾಲೆಯ ಕಾರ್ಯನಿರ್ವಹಣೆಯಲ್ಲಿ ಜವಾಬ್ದಾರಿ ತೆಗೆದುಕೊಳ್ಳುವುದು: ಮಕ್ಕಳು ಶಾಲೆಯ ಕಾರ್ಯನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ತಮ್ಮ ಕಲಿಕೆಯ ವಾತಾವರಣದ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. ಇದು, ಮಕ್ಕಳು ಸಾಮರ್ಥ್ಯವುಳ್ಳ ವ್ಯಕ್ತಿಗಳು ಮತ್ತು ಅವರ ಧ್ವನಿ, ಆಯ್ಕೆ ಮತ್ತು ಕ್ರಿಯೆಗಳಿಗೆ ಮಹತ್ವ ನೀಡಬೇಕು ಎಂಬ ನಮ್ಮ ಮೂಲ ತತ್ವದಿಂದ ಬಂದಿದೆ. ಮಕ್ಕಳಿಗೆ ಜವಾಬ್ದಾರಿಯನ್ನು ನೀಡಿದಾಗ, ಅವರು ತಮ್ಮಲ್ಲಿ ಮಾಲಿಕತ್ವದ ಭಾವನೆ, ಹೊಣೆಗಾರಿಕೆಯ ಮನೋಭಾವ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ. ಇದನ್ನು ಸಾಧಿಸಲು ನಾವು ಉದ್ದೇಶಪೂರ್ವಕವಾಗಿ ಶಾಲಾ ಸಭೆಗಳನ್ನು ಮತ್ತು ವಿದ್ಯಾರ್ಥಿ ಸಮಿತಿಗಳನ್ನು ಪ್ರೋತ್ಸಾಹಿಸುತ್ತೇವೆ.

ಮೂಲ ಸೌಕರ್ಯಗಳು

  • 7 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ನಿರ್ಮಾಣಗೊಂಡಿರುವ ಡೇ ಬೋರ್ಡಿಂಗ್ ಶಾಲೆ
  • ವಿಶಾಲವಾದ ತರಗತಿ ಕೊಠಡಿಗಳು ಮತ್ತು ಸುಸಜ್ಜಿತ ಗ್ರಂಥಾಲಯ
  • ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಮತ್ತು ಉತ್ತಮ ಗುಣಮಟ್ಟದ ಮಧ್ಯಾಹ್ನದ ಊಟವನ್ನು ನೀಡುವ ವಿಶಾಲವಾದ ಊಟದ ಮನೆ
  • ಸುಸಜ್ಜಿತ ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ಪ್ರಯೋಗಾಲಯಗಳು
  • ಪ್ರತ್ಯೇಕ ಕಲೆ ಮತ್ತು ಸಂಗೀತ ಕೊಠಡಿಗಳು
  • ಸಂಪನ್ಮೂಲ ಕೊಠಡಿ, ಕಂಪ್ಯೂಟರ್ ಲ್ಯಾಬ್
  • ವೈದ್ಯಕೀಯ ಕೊಠಡಿ
  • ಕ್ರೀಡಾ ಕೊಠಡಿ ಮತ್ತು ಆಟದ ಸಾಧನಗಳನ್ನೊಳಗೊಂಡ ವಿಶಾಲವಾದ ಆಟದ ಮೈದಾನ
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.