ಸರ್ಕಾರಿ ಶಾಲಾ ವ್ಯವಸ್ಥೆಯಲ್ಲಿನ ಶಿಕ್ಷಣದ ಗುಣಮಟ್ಟ ಮತ್ತು ಸಮತೆಯನ್ನು ಸುಧಾರಿಸುವುದೇ ಶಿಕ್ಷಣ ಕ್ಷೇತ್ರದಲ್ಲಿನ ನಮ್ಮ ಕೆಲಸದ ಗುರಿ
ನಾವು ಶಾಲಾ ವ್ಯವಸ್ಥೆಯನ್ನು ವಿವಿಧ ರೀತಿಗಳಲ್ಲಿ ಬಲಪಡಿಸಲು ಆಶಿಸುತ್ತೇವೆ. ನಾವು ಶಿಕ್ಷಕರು, ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಮತ್ತು ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿರುವ ಇತರ ಭಾಗೀದಾರರೊಂದಿಗೆ ನೇರವಾಗಿ ಕೆಲಸ ಮಾಡುತ್ತೇವೆ. ಇವೆಲ್ಲವೂ, ಶಿಕ್ಷಕರು ಚೆನ್ನಾಗಿ ಪಾಠ ಮಾಡಿ, ಅದರಿಂದ ಮಕ್ಕಳು ಚೆನ್ನಾಗಿ ಕಲಿಯುವಂತೆ ಮಾಡುವ ದಿಕ್ಕಿನಲ್ಲಿ ಒಂದು ಪ್ರಯತ್ನ.

ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ಮತ್ತು ಅಜೀಂ ಪ್ರೇಮ್ಜಿ ಶಾಲೆಗಳು, ಫೌಂಡೇಷನ್ನ ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜಕ್ಕೆ ಕೊಡುಗೆ ನೀಡುವ ದೂರದೃಷ್ಟಿಯ ಮೂರ್ತರೂಪಗಳಾಗಿವೆ. ಈ ಸಂಸ್ಥೆಗಳು, ಶಿಕ್ಷಣದ ಮೂಲಕ ಸಕಾರತ್ಮಕ ಸಾಮಾಜಿಕ ಬದಲಾವಣೆಗೆ ವೇಗ ನೀಡುವ ಗುರಿಯನ್ನು ಹೊಂದಿವೆ.
ಶಿಕ್ಷಣ ಕ್ಷೇತ್ರದಲ್ಲಿ ನಾವು, ನಮ್ಮ ಕ್ಷೇತ್ರ ಸಂಸ್ಥೆಗಳು ಮತ್ತು ಸಹವರ್ತಿಗಳ ಮೂಲಕ ನೇರವಾಗಿ ತಳಸ್ತರದಲ್ಲಿ ಕೆಲಸ ಮಾಡುತ್ತೇವೆ.
ಶಾಲಾ ಶಿಕ್ಷಣ
ಶಾಲಾ ಶಿಕ್ಷಣದಲ್ಲಿ ಯೋಜನಾತ್ಮಕ ಹಸ್ತಕ್ಷೇಪದ ಮೂಲಕ ಅಜೀಂ ಪ್ರೇಮ್ಜಿ ಫೌಂಡೇಷನ್ನ ಪ್ರಯಾಣವು ಪ್ರಾರಂಭವಾಯಿತು. ಮೊದಲ 10 ವರ್ಷಗಳ ಯೋಜನಾತ್ಮಕ ಹಸ್ತಕ್ಷೇಪದ ನಂತರ, ತಳಮಟ್ಟದಲ್ಲಿ ಸಾರ್ವಜನಿಕ ಶಾಲಾ ಶಿಕ್ಷಣವನ್ನು ಬಲಪಡಿಸಲು ಕ್ಷೇತ್ರ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ನಾವು ಸಾಂಸ್ಥಿಕ ವಿಧಾನವನ್ನು ಅಳವಡಿಸಿಕೊಂಡೆವು. ಕ್ಷೇತ್ರ ಮಟ್ಟದಲ್ಲಿ ನಮ್ಮ ತಂಡಗಳು, ತರಗತಿಯೊಳಗಿನ (ಶಿಕ್ಷಕರು, ಮುಖ್ಯ ಶಿಕ್ಷಕರು, ಶೈಕ್ಷಣಿಕ ಅಧಿಕಾರಿಗಳು ಮತ್ತು ಭಾಗೀದಾರರು) ಬೋಧನೆ ಮತ್ತು ಕಲಿಕೆಯ ಮೇಲೆ ಪ್ರಭಾವವನ್ನು ಹೊಂದಿರುವ ವ್ಯಕ್ತಿಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತವೆ.

ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಕೆಲಸವು, ಹಲವು ವರ್ಷಗಳ ನಮ್ಮ ಅನುಭವದಿಂದ ಹೊಮ್ಮಿರುವ ಶಿಕ್ಷಣ ಕ್ಷೇತ್ರದ ಕುರಿತಾದ ಅರಿವಿನ ಮೇಲೆ ನಿಂತಿದೆ.
ಒಬ್ಬ ವ್ಯಕ್ತಿ ಮತ್ತು ಸಮಾಜವನ್ನು ಬೆಳೆಸುವಲ್ಲಿ ಶಾಲಾ ಶಿಕ್ಷಣವು ಅತಿ ಮುಖ್ಯವಾದ ಸಂಘಟಿತ ಪ್ರಕ್ರಿಯೆ ಎಂದು ಅರಿತಿದ್ದೇವೆ. ಶಿಕ್ಷಣವು ಸಮಾಜವನ್ನು ರೂಪಿಸುವ ವ್ಯಕ್ತಿಗಳಲ್ಲಿ ಜ್ಞಾನ, ಸಾಮರ್ಥ್ಯಗಳು ಮತ್ತು ಮೌಲ್ಯಗಳನ್ನು ಬೆಳೆಸಬೇಕು.
ಶಿಕ್ಷಣವು ಒಂದು ಆಳವಾದ ಸಾಮಾಜಿಕ-ಮಾನವೀಯ ಪ್ರಕ್ರಿಯೆಯೆಂದೂ, ಹಾಗು ಅದರಲ್ಲಿ ತೊಡಗಿರುವ ಜನರು – ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ನಾಯಕರು ಮತ್ತು ಇತರರು – ಬಹಳ ಮುಖ್ಯ ಎಂಬುದರ ಅರಿವೂ ಸಹ ನಮಗಿದೆ. ಹಾಗಾಗಿ, ಮನುಷ್ಯ ಸಾಮರ್ಥ್ಯವು ಶಿಕ್ಷಣವನ್ನು ಸುಧಾರಿಸುವ ಪ್ರಯತ್ನದ ಮುಖ್ಯವಾದ ಅಂಗ.
ಶಾಲೆಯ ಸಂಸ್ಕೃತಿಯು ಪಠ್ಯಕ್ರಮದ ಪ್ರಮುಖ ಅಂಗವಾಗಿದೆ, ಮತ್ತು ಸಂಪನ್ಮೂಲಗಳ ಲಭ್ಯತೆ, ಪೋಷಕಾಂಶಗಳ ಪೂರೈಕೆ ಮತ್ತು ಆರೈಕೆಗಳನ್ನೊಳಗೊಂಡಂಥ ವಿದ್ಯಾರ್ಥಿಯ ಮನೆ ಮತ್ತು ಸಮುದಾಯದ ವಾತಾವರಣವು ಕಲಿಕೆಯ ಮೇಲೆ ಬೀರಬಹುದಾದ ಗಮನಾರ್ಹ ಪ್ರಭಾವಗಳನ್ನು ಗುರುತಿಸಿದ್ದೇವೆ. ಶಾಲೆಗಳು ಇವುಗಳನ್ನು ಎಷ್ಟು ಸಾಧ್ಯವೋ ಅಷ್ಟು ಸರಿದೂಗಿಸಬೇಕಾಗುತ್ತದೆ.
ಈ ಕಲಿಕೆಗಳಿಂದ ರೂಪುಗೊಂಡಿರುವ ಶಾಲಾ ಶಿಕ್ಷಣ ಕ್ಷೇತ್ರದಲ್ಲಿನ ನಮ್ಮ ಕೆಲಸವು ಹಲವು ಆಯಾಮಗಳನ್ನು ಹೊಂದಿದೆ.
ಪಠ್ಯಕ್ರಮದ ಅಭಿವೃದ್ಧಿಯಿಂದ ಹಿಡಿದು ಕಾರ್ಯನೀತಿ ರೂಪಣೆ, ಪರೀಕ್ಷಾ ಸುಧಾರಣೆ ಮತ್ತು ಮಾನವ ಸಾಮರ್ಥ್ಯದ ಬೆಳವಣಿಗೆ – ಹೀಗೆ ಈ ವ್ಯವಸ್ಥೆಯ ಪ್ರತಿಯೊಂದು ಅಂಶಕ್ಕೂ ನಾವು ಕೊಡುಗೆಯನ್ನು ನೀಡಿದ್ದೇವೆ.
ಅಂಗನವಾಡಿ ಮತ್ತು ಶಾಲೆಗಳಿಂದ ಹಿಡಿದು ರಾಜ್ಯ ಮತ್ತು ರಾಷ್ಟೀಯ ಮಟ್ಟದ ಸಂಸ್ಥೆಗಳವರೆಗೆ – ಶಿಕ್ಷಣ ವ್ಯವಸ್ಥೆಯ ಪ್ರತಿ ಹಂತದಲ್ಲೂ ಮಾನವ ಸಾಮರ್ಥ್ಯದ ಅಭಿವೃದ್ಧಿಗೆ ಕೊಡುಗೆ ನೀಡುವುದೇ ನಮ್ಮ ಗುರಿಯಾಗಿದೆ. ಕ್ಷೇತ್ರ ಸಂಸ್ಥೆಗಳ ರೂಪದಲ್ಲಿರುವ ನಮ್ಮ ತಳಸ್ತರದ ಸಾಂಸ್ಥಿಕ ಉಪಸ್ಥಿತಿಯು ನಮ್ಮ ಸಾಮರ್ಥ್ಯ ಅಭಿವೃದ್ಧಿಗೆ ಸಂಬಂಧಿಸದ ಕೆಲಸವನ್ನು ಸಾಧ್ಯವಾಗಿಸುತ್ತದೆ. ಶಿಕ್ಷಣದಲ್ಲಿನ ನಮ್ಮ ಎಲ್ಲಾ ಕೆಲಸಗಳಂತೆಯೇ, ಇದನ್ನೂ ಕೂಡ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ಮಾಡುತ್ತಿದ್ದೇವೆ.
ಶಿಕ್ಷಕರ ಸಾಮರ್ಥ್ಯಗಳನ್ನು ಅಭಿವೃದ್ದಿಪಡಿಸಲು ಮತ್ತು ಅವರ ದೃಷ್ಟಿಕೋನಗಳನ್ನು ಬದಲಿಸಲು ಅವರೊಂದಿಗೆ ನಿರಂತರವಾಗಿ ತೊಡಗಿಸಿಕೊಳ್ಳುವುದು ಅತ್ಯಾವಶ್ಯಕ. ಶಾಲಾ ನಾಯಕರು ಮತ್ತು ಇತರ ಶೈಕ್ಷಣಿಕ ಅಧಿಕಾರಿಗಳ ಸಾಮರ್ಥ್ಯ ಅಭಿವೃದ್ಧಿಗೂ ನಾವು ಇದೇ ರೀತಿಯ ವಿಧಾನವನ್ನು ಅನುಸರಿಸುತ್ತೇವೆ.
ನಾವು ನಡೆಸುವ ಒಂಬತ್ತು ಅಜೀಂ ಪ್ರೇಮ್ಜಿ ಶಾಲೆಗಳು ನಮಗೆ ಶಾಲಾ ಶಿಕ್ಷಣದಲ್ಲಿನ ನಮ್ಮ ಒಟ್ಟಾರೆ ಕೆಲಸವನ್ನು ಸುಧಾರಿಸಲು ನೆರವಾಗುವ ನೇರ ಅನುಭವಗಳನ್ನು ಒದಗಿಸುತ್ತವೆ.
ನಾವು ನಮ್ಮ ನೇರ ಕ್ಷೇತ್ರ ಸಾನ್ನಿಧ್ಯ ಇರುವಂತಹ ಮತ್ತು ಇಲ್ಲದಿರುವ ಸ್ಥಳಗಳಲ್ಲೂ ಸಹ ಇದೇ ರೀತಿಯ ಸಾಮರ್ಥ್ಯ ಅಭಿವೃದ್ಧಿಯನ್ನು ಸಾಧ್ಯವಾಗಿಸಲು ರಾಜ್ಯ ಸರ್ಕಾರ ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎಸ್ ಸಿ ಇ ಆರ್ ಟಿ ) ಮತ್ತು ಪರೀಕ್ಷಾ ಮಂಡಳಿಗಳಂತಹ ಸಂಸ್ಥೆಗಳ ಜೊತೆ ಕೆಲಸ ಮಾಡುತ್ತೇವೆ.
ನಾವು ಪಠ್ಯಕ್ರಮ, ಪಠ್ಯಪುಸ್ತಕಗಳು,ಪರೀಕ್ಷೆಗಳು, ಶಿಕ್ಷಕ ತರಬೇತಿ ಮತ್ತು ಕಾರ್ಯನೀತಿ ರೂಪಣೆಗಳ ವಿಷಯಗಳಲ್ಲಿ ವಿವಿಧ ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರ ಮತ್ತು ಅವುಗಳ ಸಂಸ್ಥೆಗಳಿಗೂ ನಮ್ಮ ನೆರವನ್ನು ನೀಡುತ್ತೇವೆ. ನಮ್ಮ ಕ್ಷೇತ್ರ ಸಂಸ್ಥೆಗಳು ಏಳು ರಾಜ್ಯಗಳಲ್ಲಿದ್ದರೂ, ನಾವು ದೇಶದಾದ್ಯಂತ ಇತರ 17 ರಾಜ್ಯಗಳ ಶಾಲಾ ವ್ಯವಸ್ಥೆಗಳೊಡನೆ ಕೆಲಸ ಮಾಡುತ್ತೇವೆ.
ನಾವು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವಾಸ್ತವ ಜಗತ್ತಿಗೆ ಮುಖ್ಯವಾದ ಸಮಸ್ಯೆಗಳ ಬಗ್ಗೆಯೂ ಸಂಶೋಧನೆ ನಡೆಸಿ, ಅವುಗಳನ್ನು ಪ್ರಕಟಿಸುತ್ತೇವೆ.
ವಿಶ್ವವಿದ್ಯಾಲಯ
2010ರಲ್ಲಿ, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಮೊದಲ ಕ್ಯಾಂಪಸ್ ಅನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ನಮ್ಮ ಎರಡನೆಯ ಕ್ಯಾಂಪಸ್ ಅನ್ನು ಭೋಪಾಲ್ನಲ್ಲಿ 2023ರಲ್ಲಿ ಉದ್ಘಾಟಿಸಲಾಯಿತು. ನಮ್ಮ ಮೂರನೆಯ ಕ್ಯಾಂಪಸ್ ರಾಂಚಿಯಲ್ಲಿ ಬರಲಿದೆ.
ವಿಶ್ವವಿದ್ಯಾಲಯದಲ್ಲಿ, ನಾವು ಶಿಕ್ಷಣ ವಿಭಾಗದ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸಲು ಹಲವು ಕಾರ್ಯಕ್ರಮಗಳ ಶ್ರೇಣಿಯನ್ನೇ ಒದಗಿಸುತ್ತೇವೆ. ಅವು ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ, ಆರಂಭಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ (ಇ.ಸಿ.ಸಿ.ಇ.), ಸಮನ್ವಯ ಶಿಕ್ಷಣ, ಕಲಿಕಾ ದೌರ್ಬಲ್ಯವುಳ್ಳ ಮಕ್ಕಳ ಬೋಧನೆ, ಇ.ಸಿ.ಇ ಮತ್ತು ಶೈಕ್ಷಣಿಕ ಮೌಲ್ಯಮಾಪನ ವಿಷಯಗಳಲ್ಲಿ ಡಿಪ್ಲೊಮಾ ಪದವಿಗಳು, ಮತ್ತು ವಿಜ್ಞಾನ ಮತ್ತು ಶಿಕ್ಷಣದಲ್ಲಿ ಸ್ನಾತಕಪೂರ್ವ ಪದವಿಗಳನ್ನು ಒಳಗೊಂಡಿವೆ.




