ಕ್ಷೇತ್ರ ಸಂಸ್ಥೆಗಳು

FieldInstitutes

ಶಿಕ್ಷಣದ ಗುಣಮಟ್ಟ ಹಾಗೂ ಲಭ್ಯತೆಯು ನಮ್ಮ ಕೆಲಸದ ಮಾರ್ಗದರ್ಶಿ ಸೂತ್ರವಾಗಿದೆ

ನಮ್ಮ ಜಿಲ್ಲಾ ಸಂಸ್ಥೆಗಳು ದೇಶದ 6 ರಾಜ್ಯಗಳು 59 ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿವೆ. ನಮ್ಮ ತಂಡಗಳ 1700ಕ್ಕೂ ಹೆಚ್ಚಿನ ಸದಸ್ಯರು ಇವಿಷ್ಟೂ ಜಿಲ್ಲೆಗಳ 291 ಪಟ್ಟಣಗಳಲ್ಲಿ ನೆಲೆ ನಿಂತು ಈ ಸಂಸ್ಥೆಗಳಲ್ಲಿ ಕಾರ್ಯನಿರತರಾಗಿದ್ದಾರೆ. ಈ 60 ಜಿಲ್ಲೆಗಳಾದ್ಯಂತ ನಾವು 263 ಶಿಕ್ಷಕ ಕಲಿಕಾ ಕೇಂದ್ರಗಳನ್ನು ಕೂಡ ನಡೆಸುತ್ತಿದ್ದೇವೆ. ಕಳೆದ 20 ವರ್ಷಗಳಲ್ಲಿ ನಾವು ನಿರ್ಮಾಣ ಮಾಡಿರುವ ಈ ತಳಸ್ತರದ ಸಂಸ್ಥೆಗಳು ನಮ್ಮ ಕೆಲಸಗಳನ್ನು ನಾವು ತೀವ್ರತೆಯಿಂದ, ಆಳವಾಗಿ ಹಾಗೂ ನಿರಂತರವಾಗಿ ನಡೆಸಲು ಅನುವುಮಾಡಿಕೊಟ್ಟಿವೆ.

FieldInstitutes

ಶಿಕ್ಷಣ ಕ್ಷೇತ್ರದಲ್ಲಿ ನಾವು ನಡೆಸಿರುವ ನಮ್ಮ ವ್ಯಾಪಕವಾದ ಕೆಲಸಕಾರ್ಯಗಳ ಮೇಲೆ ಈ ಜಿಲ್ಲಾ ಸಂಸ್ಥೆಗಳ ಉಗಮವು ನೆಲೆಗೊಂಡಿದೆ. ಭಾರತ ದೇಶದ ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಬೆಂಬಲಿಸುವ ಸಂಕಲ್ಪದೊಂದಿಗೆ ನಾವು ಈ ಕಾರ್ಯವನ್ನು ಪ್ರಾರಂಭಿಸಿದೆವು. ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಕಾಡುತ್ತಿರುವ ಬಹುಮುಖ್ಯ ಸಮಸ್ಯೆಗಳಾದ ಮಕ್ಕಳು ಶಾಲೆಯನ್ನು ತೊರೆಯುತ್ತಿರುವ ಪ್ರಮಾಣವನ್ನು ಕಡಿಮೆಗೊಳಿಸುವ ಹಾಗೂ ಶಾಲೆಗಳನ್ನು ಸುರಕ್ಷಿತ ಮತ್ತು ಎಲ್ಲರನ್ನೂ ಒಳಗೊಳಿಸಿಕೊಳ್ಳುವಂತಹ ತಾಣಗಳನ್ನಾಗಿ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಧಾರಿತ ಮಧ್ಯಪ್ರವೇಶಿಕೆಗಳೊಂದಿಗೆ ನಾವು ನಮ್ಮ ಕಾರ್ಯವನ್ನು ಪ್ರಾರಂಭ ಮಾಡಿದೆವು. ಇದಾದ ಒಂದು ದಶಕದ ನಂತರ, ನಮ್ಮ ಕಾರ್ಯವಿಧಾನವನ್ನು ಬಹುಮಟ್ಟಿಗೆ ನಾವು ಸಾಂಸ್ಥಿಕ ಸ್ವರೂಪಕ್ಕೆ ಬದಲಾಯಿಸಿಕೊಂಡೆವು. ಆ ಸಂದರ್ಭದಲ್ಲಿ ನಾವು ಜಿಲ್ಲಾ ಸಂಸ್ಥೆಗಳನ್ನು ಸ್ಥಾಪಿಸಲು ನಿರ್ಧರಿಸಿದೆವು. ಅವುಗಳ ಮೂಲಕ ನಾವು ಈಗ ಶಿಕ್ಷಣ ಕ್ಷೇತ್ರದಿಂದ ತೊಡಗಿ ಆರೋಗ್ಯ ಮತ್ತು ಜೀವನೋಪಾಯ ಮಾರ್ಗಗಳನ್ನು ಬಲಪಡಿಸುವ ಕ್ಷೇತ್ರದವರೆಗೆ ನಮ್ಮದೇ ಆದ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದೇವೆ.

ತಳಸ್ತರದ ನಮ್ಮ ಈ ಉಪಸ್ಥಿತಿಯು ನಮ್ಮನ್ನು ಸ್ಥಳೀಯ ಸಮುದಾಯದ ಭಾಗವನ್ನಾಗಿಸಿದೆ. ಇದು ಅಲ್ಲಿನ ಸಮಸ್ಯೆಗಳು ಮತ್ತು ಆದ್ಯತೆಗಳಿಗೆ ತಕ್ಕ ಹಾಗೆ ನಮ್ಮನ್ನು ನಾವು ನಿಖರವಾದ ರೀತಿಯಲ್ಲಿ ತೊಡಗಿಸಿಕೊಳ್ಳಲು ನಮಗೆ ಅನುವುಮಾಡಿಕೊಟ್ಟಿದೆ. ಇದು ಸರ್ಕಾರಿ ಶಾಲಾ ವ್ಯವಸ್ಥೆಯ ಗುಣಮಟ್ಟ ಮತ್ತು ಸಮತೆಯ ಪ್ರಶ್ನೆಗಳನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಮ್ಮ ಈ ಕಾರ್ಯದ ಭಾಗವಾಗಿ ನಾವು ಒಂಬತ್ತು ಪ್ರಾತ್ಯಕ್ಷಿಕ ಶಾಲೆಗಳನ್ನು ಕೂಡ ನಡೆಸುತ್ತಿದ್ದೇವೆ. ಇವುಗಳನ್ನು ʼಅಜೀಂ ಪ್ರೇಮ್‌ಜಿ ಶಾಲೆʼ ಗಳೆಂದು ಕರೆಯಲಾಗುತ್ತದೆ.

ಈ ಸಾಂಸ್ಥಿಕ ಕಾರ್ಯಜಾಲದೊಂದಿಗೆ ನಾವು ನಮ್ಮ ಕೆಲಸವನ್ನು ಆರೋಗ್ಯ (ಶಿಶುಪಾಲನಾ ಕೇಂದ್ರಗಳನ್ನು ನಡೆಸುವುದು ಸೇರಿದಂತೆ), ಜೀವನೋಪಾಯ ಮಾರ್ಗಗಳು ಮತ್ತು ಯುವಜನರ ಭಾಗವಹಿಸುವಿಕೆಯಂತಹ ಇತರ ಕ್ಷೇತ್ರಗಳಿಗೆ ನಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗಿದೆ. ನಮ್ಮ ಬಹುತೇಕ ಕೆಲಸಕಾರ್ಯಗಳು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಡೆಯುತ್ತವೆ ಮತ್ತು ಅವು ಸಾರ್ವಜನಿಕ ವ್ಯವಸ್ಥೆಗಳಲ್ಲಿ ಸುಧಾರಣೆಯನ್ನು ತರಲು ನೆರವಾಗುತ್ತವೆ.

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಪರಿಹಾರ ಕಾರ್ಯವನ್ನು ಕೈಗೊಳ್ಳುವುದರಲ್ಲಿ ಹಾಗೂ ಲಸಿಕೆ ನೀಡುವುದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಬಹು ವ್ಯಾಪಕ ಪ್ರಮಾಣದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡ ನಂತರ, 2022ರಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಫೌಂಡೇಷನ್‌ನ ಉಪಕ್ರಮಗಳನ್ನು ಬೆಂಗಳೂರು ನಗರದ ಮೂರು ಕೊಳಗೇರಿ ಸಮೂಹಗಳಲ್ಲಿ ಪರಿಚಯಿಸಲಾಯಿತು. ನಂತರ 2023ರಲ್ಲಿ, ಇದು ಝಾರ್ಖಂಡ್‌ ಮತ್ತು ಛತ್ತೀಸ್‌ಘಡ ರಾಜ್ಯಗಳ ಗಡಿಭಾಗದ ಸುತ್ತಲಿನ 10 ಜಿಲ್ಲೆಗಳಿಗೆ ವಿಸ್ತರಿಸಿತು. ಅದೇ ವರ್ಷದಲ್ಲಿ ಭೋಪಾಲ್‌ನಲ್ಲಿರುವ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಪದವಿ (MPH) ಕಾರ್ಯಕ್ರಮವನ್ನು ಪರಿಚಯಿಸಲಾಯಿತು.

ದುರ್ಗಮ ಆದಿವಾಸಿ ಸಮುದಾಯಗಳಿರುವ ಪ್ರದೇಶಗಳಿಂದ ಹಿಡಿದು ನಗರದ ಅನೌಪಚಾರಿಕ ಜನವಸತಿ ಪ್ರದೇಶಗಳವರೆಗೆ ದುರ್ಬಲ ವರ್ಗಗಳಿಗೆ ಸೇರಿದ ಕುಟುಂಬಗಳ ಆರೋಗ್ಯ ಸುಧಾರಣೆಗಾಗಿ ನಾವು ಕೆಲಸ ಮಾಡುತ್ತಿದ್ದೇವೆ.

ಜೀವನೋಪಾಯ ಮಾರ್ಗಗಳು ನಾವು ಕಾರ್ಯಪ್ರವೃತ್ತವಾಗಿರುವ ಮತ್ತೊಂದು ಪ್ರಮುಖ ಕ್ಷೇತ್ರವಾಗಿದೆ.

ದೇಶದ ಅತ್ಯಂತ ದುರ್ಬಲವರ್ಗಕ್ಕೆ ಸೇರಿದ ಕೆಲವು ಸಮುದಾಯಗಳ ಕುಟುಂಬಗಳ ಆದಾಯದಲ್ಲಿ ಗಮನಾರ್ಹ ಹಾಗೂ ನಿರಂತರ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ನೆರವಾಗುವುದು ನಮ್ಮ ಉದ್ದೇಶವಾಗಿದೆ. ಇದರಿಂದಾಗಿ ನಮ್ಮ ತಂಡಗಳು ಸಾಂಪ್ರದಾಯಿಕ ಜೀವನ ನಿರ್ವಹಣಾ ಮಾರ್ಗಗಳ ಮೌಲ್ಯವರ್ಧನೆಯನ್ನು ಉತ್ತೇಜಿಸುವುದರಿಂದ ತೊಡಗಿ ‘ನರೇಗಾ’ (MNREGA) ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗಳಂತಹ ಸರ್ಕಾರಿ ಕಾಯ್ದೆಗಳ ಅಡಿಯಲ್ಲಿ ಕೊಡಮಾಡಿರುವ ಹಕ್ಕುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಹಲವು ಮಹತ್ವದ ಅಂಶಗಳನ್ನೂ ಒಳಗೊಂಡಂತೆ ಜನಸಮುದಾಯಗಳ ನಡುವೆ ಆದಾಯ ಉತ್ಪಾದನೆಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ.

2022ರ ಪ್ರಾರಂಭದಿಂದಲೇ ಆದಿವಾಸಿ ಕೇಂದ್ರಸ್ಥಾನವಾದ ಛತ್ತೀಸ್‌ಗಡ ಮತ್ತು ಝಾರ್ಖಂಡ್‌ನ ರಾಯ್‌ಗಢ ಹಾಗೂ ಗುಮ್ಲಾ ಜಿಲ್ಲೆಗಳಲ್ಲಿ ಸುಸ್ಥಿರ ಜೀವನೋಪಾಯ ಮಾರ್ಗಗಳ ಬಲವರ್ಧನೆಯನ್ನು ನಮ್ಮ ಆದ್ಯತೆಯ ಕಾರ್ಯವನ್ನಾಗಿ ಕೈಗೆತ್ತಿಕೊಳ್ಳಲಾಗಿದೆ.

ನಾವು ನಮ್ಮ ಜಿಲ್ಲಾ ಸಂಸ್ಥೆಗಳನ್ನು ಹೊಂದಿರುವ ಏಳು ರಾಜ್ಯಗಳು ಮತ್ತು ಇತರ 10 ರಾಜ್ಯಗಳಲ್ಲೂ ಇದೇ ಬಗೆಯ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಯೂನಿವರ್ಸಿಟಿ ರಿಸೋರ್ಸ್‌ ಸೆಂಟರ್‌ನ ಮೂಲಕ ನಾವು ಶಿಕ್ಷಣ ಇಲಾಖೆಯ ಉನ್ನತ ಕಾರ್ಯನಿರ್ವಾಹಕರೊಂದಿಗೆ ಸಮಾಲೋಚನಾ ಕಾರ್ಯಾಗಾರಗಳನ್ನು ನಡೆಸುತ್ತೇವೆ, ರಾಜ್ಯ ಪರೀಕ್ಷಾ ಮಂಡಳಿಯ ಪರೀಕ್ಷೆಗಳನ್ನು ಸುಧಾರಿಸಲು ಪ್ರಯತ್ನಿಸುತ್ತೇವೆ, ಮತ್ತು ಶಿಕ್ಷಕರು ಹಾಗೂ ಶಿಕ್ಷಕ ಶಿಕ್ಷಕರಿಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರಗಳನ್ನು ನಡೆಸುತ್ತೇವೆ.

ನಮ್ಮ ಜಿಲ್ಲಾ ಸಂಸ್ಥೆಗಳ ಕೆಲಸಕಾರ್ಯಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ:

  • ಶಿಕ್ಷಕರು, ಪ್ರಾಂಶುಪಾಲರು, ಗ್ರಾಮ ಪಂಚಾಯತಿಗಳ ಕಾರ್ಯನಿರ್ವಾಹಕರು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕಾರ್ಯಕರ್ತರು, ಜಿಲ್ಲಾ ಮತ್ತು ಬ್ಲಾಕ್ಮಟ್ಟದ ಕಾರ್ಯನಿರ್ವಾಹಕರು ಮತ್ತು ರಾಜ್ಯಮಟ್ಟದ ಆಡಳಿತ ನಾಯಕರನ್ನು ಒಳಗೊಂಡ ಸಮೂಹಗಳ ಸಾಮರ್ಥ್ಯ ಅಭಿವೃದ್ಧಿ.   

  • ಸಾಮಾಜಿಕ ಕ್ರಿಯೆಗಾಗಿ ಯುವಜನರೊಂದಿಗೆ ಕೆಲಸ ಮಾಡುವುದು 

  • ಜೀವನೋಪಾಯ ಮಾರ್ಗಗಳ ಕುರಿತು ರೈತರು, ಸಮುದಾಯಗಳು ಮತ್ತು ಪಂಚಾಯತಿಗಳೊಂದಿಗೆ ಯೋಜನೆಗಳ ನಿರೂಪಣೆ. 

  • ಶಿಕ್ಷಣದಲ್ಲಿ ವ್ಯಾಪಕವಾಗಿ ಸಮೂಹ ಮತ್ತು ಬ್ಲಾಕ್ಸಂಪನ್ಮೂಲ ಕೇಂದ್ರಗಳು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು (DIET)‌, ಮಾಧ್ಯಮಿಕ ಶಿಕ್ಷಣ ಮಂಡಳಿಗಳು ಮತ್ತು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (SCERT) ಗಳಿಗೆ ಬೆಂಬಲ ನೀಡುವುದು 

  • ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳ ಅಭಿವೃದ್ಧಿ, ಮೌಲ್ಯಮಾಪನ ವಿಧಾನ ಮತ್ತು ಪರೀಕ್ಷೆಗಳಲ್ಲಿ ಸುಧಾರಣೆ, ಹಾಗೂ ನೀತಿನಿರೂಪಣೆಗಳು ಮತ್ತು ಅವುಗಳ ಅನುಷ್ಠಾನ 

  • ನಾವು ಕಾರ್ಯಪ್ರವೃತ್ತರಾಗಿರುವ ಜಿಲ್ಲೆಗಳಿಂದ ಪಡೆದ ದತ್ತಾಂಶಗಳನ್ನು ಬಳಸಿಕೊಂಡು ಶಾಲಾ ಶಿಕ್ಷಣದಲ್ಲಿನ ಪ್ರಮುಖ ವಿಷಯಗಳ ಕುರಿತ ಕ್ಷೇತ್ರ ಸಂಶೋಧನೆ ಹಾಗೂ ಅಧ್ಯಯನಗಳನ್ನು ಕೂಡ ಕೈಗೊಳ್ಳಲಾಗುತ್ತದೆ.  
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.