ಅಜೀಂ ಪ್ರೇಮ್‌ಜಿ ಶಾಲೆ, ಸಿರೋಹಿ

AzimPremjiSchool

ರಾಜಸ್ಥಾನದ ಸಿರೋಹಿಯಲ್ಲಿರುವ ಅಜೀಂ ಪ್ರೇಮ್‌ಜಿ ಶಾಲೆಯು (ಸ್ಥಾಪನೆ: 2012), ನರ್ಸರಿ ಯಿಂದ ಎಂಟನೇ ತರಗತಿಯವರೆಗೆ ಉಚಿತ ಮತ್ತು ಉತ್ತಮ ಗುಣಮಟ್ಟದ ಇಂಗ್ಲಿಷ್-ಮಾಧ್ಯಮ ಶಿಕ್ಷಣವನ್ನು ನೀಡುತ್ತದೆ.

ಮಾಂಡ್ವ ಹಳ್ಳಿಯಲ್ಲಿ ಇರುವ ಈ ಶಾಲೆಯು ರಾಜಸ್ಥಾನ ರಾಜ್ಯ ಮಂಡಳಿಯ ಮಾನ್ಯತೆ ಪಡೆದಿದೆ. ಶಾಲೆಯಲ್ಲಿ ಮಕ್ಕಳಲ್ಲಿ ಅಕ್ಷರ ಜ್ಞಾನ ಮತ್ತು ಸಂಖ್ಯಾ ಜ್ಞಾನದಂತಹ ಬುನಾದಿ ಹಂತದ ಕೌಶಲಗಳನ್ನು ಬಲಪಡಿಸುವತ್ತ ಗಮನಹರಿಸಿ, ಮಕ್ಕಳಿಗೆ ಸುರಕ್ಷಿತವಾದ, ಎಲ್ಲರನ್ನೂ ಒಳಗೊಳ್ಳುವಂತಹ, ಭಯಮುಕ್ತವಾದ ಮತ್ತು ಸಂತೋಷದಾಯಕವಾದ ಕಲಿಕಾ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸಲಾಗುತ್ತದೆ. ವಿವಿಧ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಹಿನ್ನೆಲೆಯ ಮಕ್ಕಳನ್ನು ಸ್ವಾಗತಿಸುವ ಈ ಶಾಲೆಯು ಸಮತೆ, ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಅಲ್ಲದೆ, ಶಿಕ್ಷಣದ ಮೂಲಕ ಒಂದು ನ್ಯಾಯಯುತ, ಮಾನವೀಯ ಮತ್ತು ಸುಸ್ಥಿರ ಸಮಾಜದ ನಿರ್ಮಾಣಕ್ಕೂ ಬದ್ಧವಾಗಿದೆ.

Azim Premji School Sirohi

ಮುಕ್ತ ಸಂವಹನ, ಅಭಿವ್ಯಕ್ತಿ ಸ್ವಾತಂತ್ರ್ಯ, ಜವಾಬ್ದಾರಿಯ ಹಂಚಿಕೆ ಮತ್ತು ಪರಸ್ಪರ ಗೌರವವಿರುವ ವಾತಾವರಣದಲ್ಲಿ ಮಾತ್ರ ಅರ್ಥಪೂರ್ಣ ಕಲಿಕೆ ಸಾಧ್ಯ ಎಂದು ನಾವು ನಂಬುತ್ತೇವೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇಬ್ಬರಿಗೂ ಭಯ, ತಾರತಮ್ಯ ಮತ್ತು ಸಾಮಾಜಿಕ ಅಡೆತಡೆಗಳಿಲ್ಲದ ಸುರಕ್ಷಿತ ಹಾಗೂ ಸಮಾನ ಅವಕಾಶವಿರುವ ವಾತಾವರಣವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಶಾಲೆಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳಲ್ಲಿ ಪ್ರತಿ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ (30:1 ಅನುಪಾತ). ಆರಂಭಿಕ ಬಾಲ್ಯ ಶಿಕ್ಷಣದ ತರಗತಿಗಳಲ್ಲಿ ಪ್ರತಿ 15 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ (15:1 ಅನುಪಾತ).

ಮಕ್ಕಳ ಕುರಿತು ನಮ್ಮ ನಂಬಿಕೆಗಳು

ಪ್ರತಿಯೊಂದು ಮಗುವಿಗೂ ಕಲಿಯುವ ಸಾಮರ್ಥ್ಯವಿರುತ್ತದೆ ಹಾಗೂ ಪ್ರತಿಯೊಬ್ಬ ಮಗುವೂ ತನ್ನದೇ ಆದ ವಿಶಿಷ್ಟ ಕುತೂಹಲ, ಭಾಷೆ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ. ಮಕ್ಕಳನ್ನು ಗೌರವದಿಂದ ನಡೆಸಿಕೊಂಡಾಗ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಅವರು ಉತ್ತಮವಾಗಿ ಬೆಳೆಯಲು ಸಾಧ್ಯ. ಮಕ್ಕಳು ಅನ್ವೇಷಣೆ, ಅನುಭವ, ಸಂಭಾಷಣೆ, ಚಟುವಟಿಕೆ ಮತ್ತು ಸೃಜನಶೀಲ ಅಭಿವ್ಯಕ್ತಿಗಳ ಮೂಲಕ ಜ್ಞಾನವನ್ನು ಪಡೆದುಕೊಳ್ಳುತ್ತಾರೆ; ಹಾಗೆಯೇ ತಮ್ಮ ಗೆಳೆಯರೊಂದಿಗೆ ಸೇರಿ ಕಲಿಯುವುದು ಕೂಡ ಅವರಿಗೆ ತುಂಬಾ ಪರಿಣಾಮಕಾರಿಯಾಗಿರುತ್ತದೆ. ಪ್ರತಿಯೊಂದು ಮಗುವೂ ತನ್ನದೇ ಆದ ವೇಗದಲ್ಲಿ ಕಲಿಯುತ್ತದೆ. ಮಕ್ಕಳ ದೈಹಿಕ ಬೆಳವಣಿಗೆಯು ಅವರ ಭಾವನಾತ್ಮಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ. ಮಕ್ಕಳು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆಯಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಒಂದೇ ಮಗುವು ಬೇರೆ ಬೇರೆ ಸಮಯದಲ್ಲಿ ವಿಭಿನ್ನವಾಗಿ ವರ್ತಿಸಬಹುದು ಎಂಬುದನ್ನು ನಾವು ಗುರುತಿಸುತ್ತೇವೆ. ಈ ಕಾರಣದಿಂದಾಗಿ, ಬೋಧನೆ ಮತ್ತು ಕಲಿಕೆಯಲ್ಲಿ ಮಗುವಿನ ಅಗತ್ಯಕ್ಕೆ ತಕ್ಕಂತೆ ಸ್ಪಂದಿಸುವ ಒಂದು ವಿಧಾನದ ಅಗತ್ಯವಿದೆ ಎಂದು ನಾವು ನಂಬುತ್ತೇವೆ.

ನಮ್ಮ ಶಾಲೆಯಲ್ಲಿನ ಬೋಧನಾ-ಕಲಿಕೆ ಪ್ರಕ್ರಿಯೆಗಳು

ತರಗತಿ ಬೋಧನೆ: ನಮ್ಮ ತರಗತಿಗಳು ವಿದ್ಯಾರ್ಥಿಗಳನ್ನು ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸುವತ್ತ ಗಮನಹರಿಸುತ್ತವೆ. ಮಕ್ಕಳು ಪ್ರಶ್ನಿಸಲು, ಅನ್ವೇಷಿಸಲು, ಕಲ್ಪಿಸಿಕೊಳ್ಳಲು ಮತ್ತು ಚರ್ಚಿಸಲು ಪೂರಕವಾದ ಸವಾಲುಗಳನ್ನು ನೀಡಲಾಗುತ್ತದೆ. ಇದರ ಮೂಲಕ ವಿಷಯಗಳ ಬಗ್ಗೆ ಆಳವಾದ ತಿಳಿವಳಿಕೆಯನ್ನು ಹಾಗೂ ಕಾರ್ಯವಿಧಾನದ ನೈಪುಣ್ಯತೆಯನ್ನು ಬೆಳೆಸಲು ಪ್ರೋತ್ಸಾಹಿಸಲಾಗುತ್ತದೆ.

ಸೃಜನಶೀಲ ಅಭಿವ್ಯಕ್ತಿಗೆ ಆದ್ಯತೆ: ಸರ್ವತೋಮುಖ ಶಿಕ್ಷಣದ ಭಾಗವಾಗಿ ಕಲೆ, ಸಂಗೀತ, ದೈಹಿಕ ಶಿಕ್ಷಣ, ಕರಕುಶಲ ಮತ್ತು ಕ್ಲಬ್ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇವುಗಳನ್ನು ಕೇವಲ ಪಠ್ಯೇತರ ಅಥವಾ ಐಚ್ಛಿಕ ವಿಷಯಗಳೆಂದು ಪರಿಗಣಿಸದೆ, ಪ್ರತಿ ಮಗುವಿನ ಸಮಗ್ರ ಅಭಿವೃದ್ಧಿಗೆ ಪೂರಕವಾದ ಅವಿಭಾಜ್ಯ ಅಂಗಗಳೆಂದು ಭಾವಿಸಲಾಗುತ್ತದೆ. ಕಲೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮಕ್ಕಳಲ್ಲಿ ಸೃಜನಶೀಲತೆ, ಭಾವನಾತ್ಮಕ ಅಭಿವ್ಯಕ್ತಿ, ಸಹಕಾರ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಜೊತೆಗೆ ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ನಾವು ನಂಬುತ್ತೇವೆ.

ಸಹಪಾಠಿಗಳಿಂದ ಮತ್ತು ಸಹಭಾಗಿತ್ವದ ಕಲಿಕೆ: ಗೆಳೆಯರಿಂದ ಕಲಿಯುವುದು ಮಕ್ಕಳಿಗೆ ತುಂಬಾ ಸಹಕಾರಿ. ವಿದ್ಯಾರ್ಥಿಗಳು ತಮಗೆ ತಿಳಿದಿರುವ ವಿಷಯಗಳನ್ನು ಒಬ್ಬರಿಗೊಬ್ಬರು ತಮಗೆ ಆಪ್ತವೆನಿಸುವ ಮತ್ತು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಿಕೊಳ್ಳುತ್ತಾರೆ. ಇದರಿಂದ ವಿವರಿಸುವವನಿಗೆ ಮತ್ತು ಕೇಳಿಸಿಕೊಳ್ಳುವವನಿಗೆ ಇಬ್ಬರಿಗೂ ವಿಷಯದ ಮೇಲಿನ ಹಿಡಿತ ಬಲಗೊಳ್ಳುತ್ತದೆ. ಸಹಭಾಗಿತ್ವದ ಕಲಿಕೆಯನ್ನು ಉತ್ತೇಜಿಸಲು, ನಾವು ತರಗತಿಗಳಲ್ಲಿ ಸ್ಪರ್ಧೆಗಿಂತ ಹೆಚ್ಚಾಗಿ ಸಹಕಾರಕ್ಕೆ ಒತ್ತು ನೀಡುವ ವಾತಾವರಣವನ್ನು ಸೃಷ್ಟಿಸುತ್ತೇವೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ಕಲಿಕಾ ಪ್ರಕ್ರಿಯೆಯಲ್ಲಿ ನೆರವಾಗುತ್ತಾರೆ. ಕಲಿಕೆ ಎಂಬುದು ಕೇವಲ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಸಂಬಂಧಕ್ಕೆ ಸೀಮಿತವಾಗಿಲ್ಲ; ಗೌರವಯುತ ಸಂಭಾಷಣೆ, ವಿದ್ಯಾರ್ಥಿಗಳ ಗುಂಪುಗಳಿಗೆ ಮಾರ್ಗದರ್ಶನ ನೀಡುವುದು ಮತ್ತು ಪ್ರತಿಫಲನಾತ್ಮಕ ಆಚರಣೆಗಳನ್ನು ಪ್ರೇರೇಪಿಸುವ ಮೂಲಕ ಶಿಕ್ಷಕರು ಮಕ್ಕಳ ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ನೆರವಾಗುತ್ತಾರೆ.

ಶಾಲೆಯ ನಿರ್ವಹಣೆಯಲ್ಲಿ ಮಕ್ಕಳ ಪಾತ್ರ: ಶಾಲೆಯ ದೈನಂದಿನ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಮತ್ತು ತಮ್ಮ ಕಲಿಕಾ ಪರಿಸರದ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು ಎಂಬುದು ನಮ್ಮ ಆಶಯ. ಮಕ್ಕಳು ಸಮರ್ಥ ವ್ಯಕ್ತಿಗಳು, ಅವರ ಧ್ವನಿ, ಆಯ್ಕೆ ಮತ್ತು ಕಾರ್ಯಗಳಿಗೆ ಬೆಲೆಯಿದೆ ಎಂಬ ನಮ್ಮ ಮೂಲ ನಂಬಿಕೆಯೇ ಇದಕ್ಕೆ ಕಾರಣ. ಮಕ್ಕಳಿಗೆ ಜವಾಬ್ದಾರಿಯನ್ನು ನೀಡಿದಾಗ ಅವರಲ್ಲಿ ‘ಇದು ನಮ್ಮ ಶಾಲೆ’ ಎಂಬ ಭಾವನೆ, ಹೊಣೆಗಾರಿಕೆ ಮತ್ತು ನಾಯಕತ್ವದ ಗುಣಗಳು ಬೆಳೆಯುತ್ತವೆ. ಇದಕ್ಕಾಗಿಯೇ ನಾವು ಅಸೆಂಬ್ಲಿಗಳು ಮತ್ತು ವಿದ್ಯಾರ್ಥಿ ಸಮಿತಿಗಳನ್ನು ವಿಶೇಷವಾಗಿ ಪ್ರೋತ್ಸಾಹಿಸುತ್ತೇವೆ.

ಮೂಲ ಸೌಕರ್ಯಗಳು

  • 7 ಎಕರೆ ವಿಸ್ತೀರ್ಣದ ಜಾಗದಲ್ಲಿರುವ ಡೇ ಬೋರ್ಡಿಂಗ್ ಶಾಲೆ
  • ವಿಶಾಲವಾದ ತರಗತಿ ಕೋಣೆಿಗಳು ಮತ್ತು ಸುಸಜ್ಜಿತ ಗ್ರಂಥಾಲಯ
  • ವಿಶಾಲವಾದ ಭೋಜನ ಶಾಲೆ. ಇಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಮಧ್ಯಾಹ್ನದ ಊಟವನ್ನು ಉಚಿತವಾಗಿ ಬಡಿಸಲಾಗುವುದು
  • ಸುಸಜ್ಜಿತ ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ಪ್ರಯೋಗಾಲಯಗಳು
  • ಪ್ರತ್ಯೇಕ ಕಲೆ ಮತ್ತು ಸಂಗೀತ ಕೊಠಡಿಗಳು
  • ಸಂಪನ್ಮೂಲ ಕೊಠಡಿ, ಕಂಪ್ಯೂಟರ್ ಲ್ಯಾಬ್
  • ವೈದ್ಯಕೀಯ ಕೊಠಡಿ
  • ಕ್ರೀಡಾ ಕೊಠಡಿ ಮತ್ತು ಆಟದ ಸಾಧನಗಳನ್ನೊಳಗೊಂಡ ವಿಶಾಲವಾದ ಆಟದ ಮೈದಾನ
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.