ಅವರು ಮತ್ತು ಅವರ ಪತ್ನಿ ಸೇರಿ ಒಂದು ಹಣ್ಣಿನ ತೋಟವನ್ನು ಬೆಳೆಸಲು ಮುಂದಾದರು — ಇದು ಕೇವಲ ಒಂದು ಕೃಷಿ ಚಟುವಟಿಕೆಯಾಗಿರದೆ, ಭವಿಷ್ಯಕ್ಕಾಗಿ ಅವರು ಮಾಡಿದ ಹೂಡಿಕೆಯಾಗಿತ್ತು.

“ನನ್ನ ಜಮೀನಿನಲ್ಲಿ ನಾನೊಂದು ಹಣ್ಣಿನ ತೋಟವನ್ನು ಬೆಳೆಸಲು ಬಯಸುತ್ತೇನೆ ಎಂದು ನಾನು ಅವರಿಗೆ ಹೇಳಿದಾಗ, ಎಲ್ಲರೂ ನನ್ನನ್ನು ಆಶ್ಚರ್ಯದಿಂದ ಮೇಲಿಂದ ಕೆಳಗೆ ನೋಡಿದರು,” ಎಂದು ಮಹಂಗು ಕುಮ್ಹಾರ್ ಅವರು ಮುಗುಳ್ನಗುತ್ತಾ ನೆನಪಿಸಿಕೊಳ್ಳುತ್ತಾರೆ.
ಸುಮಾರು 80ರ ಹರೆಯದ ಅವರು ತೋಟ ಮಾಡಲು ಮುಂದೆ ಬರುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.
ಅದು 2024ನೇ ಇಸವಿ. ಜಾರ್ಖಂಡ್ನ ಗುಮ್ಲಾ ಜಿಲ್ಲೆಯ ಸಕ್ತರ್ ಗ್ರಾಮದಲ್ಲಿ, ಅಜೀಂ ಪ್ರೇಮ್ಜೀ ಫೌಂಡೇಷನ್ನ ಜೀವನೋಪಾಯ ತಂಡದ ಸದಸ್ಯರು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MNREGA) ಅಡಿಯಲ್ಲಿ ಹಣ್ಣಿನ ತೋಟಗಳನ್ನು ಬೆಳೆಸುವ ಕುರಿತು ಸಣ್ಣ ಮತ್ತು ಅತ್ಯಂತ ಸಣ್ಣ ರೈತರೊಂದಿಗೆ ಸಭೆಗಳನ್ನು ನಡೆಸುತ್ತಿದ್ದರು. ಇದು ಸುಸ್ಥಿರ ಜೀವನೋಪಾಯ ಮತ್ತು ದೀರ್ಘಾವಧಿಯ ಆದಾಯವನ್ನು ಬೆಂಬಲಿಸುವ ಒಂದು ಪ್ರಯತ್ನವಾಗಿತ್ತು.
ಅನೇಕ ಗ್ರಾಮಸ್ಥರು ವಿಷಯವನ್ನೇನೋ ಆಲಿಸಿದರು. ಆದರೆ ಕೆಲವೇ ಕೆಲವು ಜನರು ಮಾತ್ರ ಮುಂದೆ ಬಂದರು.
ಆ ಕೆಲವೇ ಕೆಲವು ಜನರಲ್ಲಿ ಮಹಂಗು ಒಬ್ಬರು.
“ನಿಮಗೆ ವಯಸ್ಸಾಗಿದೆ. ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸುವುದು ತುಂಬಾ ಶ್ರಮದ ಕಲಸ. ಈ ವಯಸ್ಸಿನಲ್ಲಿ ನೀವು ಇದನ್ನು ಹೇಗೆ ನಿಭಾಯಿಸುತ್ತೀರಿ?” — ಇದು ಮಹಂಗು ಅವರೆಡೆಗೆ ಬಂದ ಮೊದಲ ಪ್ರಶ್ನೆಯಾಗಿತ್ತು. ಅವರ ಹೆಂಡತಿ ಭೂತ್ನಿ ದೇವಿ, ಅವರಿಗೆ ಮೌನವಾಗಿ ಬೆಂಬಲಕ್ಕೆ ನಿಂತರು. ಆ ಸಮಯದಲ್ಲಿ ಭೂತ್ನಿ ಅವರಿಗೆ 73 ವರ್ಷ ವಯಸ್ಸು.
ಅವರ ವಯಸ್ಸಿನ ಬಹುತೇಕ ಜನರು ವಿಶ್ರಾಂತಿ ಪಡೆಯುವ ಬಗ್ಗೆ ಯೋಚಿಸುತ್ತಾರೆ. ಆದರೆ ಈ ದಂಪತಿಗೆ, ಹಣ್ಣಿನ ತೋಟವು ಕೇವಲ ಕೃಷಿಯಷ್ಟೇ ಆಗಿರಲಿಲ್ಲ — ಅದು ಜೀವನವನ್ನು ಪುನರ್ನಿರ್ಮಿಸುವ ಮತ್ತು ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ದಾರಿಯಾಗಿತ್ತು.
ಮಹಂಗು ಅವರು ಜೀವನೋಪಾಯ ತಂಡದೊಂದಿಗೆ ಆತ್ಮವಿಶ್ವಾಸದಿಂದ ಕೇಳಿದರು. “ನನ್ನ ಬಳಿ ಭೂಮಿ ಇರುವಾಗ, ನಾನು ಅದನ್ನು ಏಕೆ ಬಳಸಬಾರದು?”.

ಮಹಂಗು ಅವರ ದೃಢ ನಿರ್ಧಾರವು ತಂಡವನ್ನು ಧರ್ಮಸಂಕಟಕ್ಕೆ ಸಿಲುಕಿಸಿತು. “ಗಿಡ ನೆಡಲು ಗುಂಡಿ ಅಗೆಯುವುದರಿಂದ ಹಿಡಿದು, ಮರಗಳನ್ನು ಪೋಷಿಸುವುದು, ಹಣ್ಣುಗಳನ್ನು ಕೊಯ್ಲು ಮಾಡುವುದು ಮತ್ತು ಅವುಗಳನ್ನು ಮಾರಾಟ ಮಾಡುವವರೆಗೆ — ಒಂದು ಹಣ್ಣಿನ ತೋಟವನ್ನು ನಿರ್ಮಿಸಿ ನಿರ್ವಹಿಸುವ ಕಠಿಣ ಕೆಲಸವನ್ನು ಯುವಕರು ಮಾತ್ರ ಮಾಡಲು ಸಾಧ್ಯ ಎಂದು ನಾವು ಭಾವಿಸಿದ್ದೆವು. ಆದರೆ ಮಹಂಗು ದಾದಾ ನಮ್ಮ ಊಹೆಗಳನ್ನು ಸುಳ್ಳಾಗಿಸಿಬಿಟ್ಟರು”, ಎಂದು ಹೇಳಿದರು ಫೌಂಡೇಷನ್ನ ಸದಸ್ಯರಾದ ಹನ್ಸಿಕಾ ಕುಮಾರಿ ಅವರು.
ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ, ಮಹಂಗು ಅವರ ಶ್ರಮ ಮತ್ತು ಫೌಂಡೇಷನ್ನ ಬೆಂಬಲ ಹಾಗೂ ಮಾರ್ಗದರ್ಶನವು ಫಲ ನೀಡಿತು. ಎಂಬತ್ತರ ಹರೆಯದ ಈ ವೃದ್ಧರು ತಾವು ಬೆಳೆದ ಮೊದಲ ಮಾವಿನ ಹಣ್ಣನ್ನು ತಂಡದೊಂದಿಗೆ ಹೆಮ್ಮೆಯಿಂದ ಹಂಚಿಕೊಂಡರು.
ಮೇ 2020ರಲ್ಲಿ ಪ್ರಾರಂಭಿಸಲಾದ ಜಾರ್ಖಂಡ್ ಸರ್ಕಾರದ ‘ಬಿರ್ಸಾ ಹರಿತ್ ಗ್ರಾಮ್ ಯೋಜನೆ’ಯ ನೆರವು ಪಡೆದು, ಮಹಂಗು ಮತ್ತು ಗುಮ್ಲಾ ಜಿಲ್ಲೆಯ ಮೂರು ಬ್ಲಾಕ್ಗಳ ಇತರ 400 ಜನರು ಮಾವಿನ ತೋಟಗಳನ್ನು ಬೆಳೆಸಿದರು. ಬಂಜರು ಮತ್ತು ಪಾಳು ಬಿದ್ದ ಭೂಮಿಯನ್ನು ಹಣ್ಣಿನ ತೋಟಗಳಾಗಿ ಪರಿವರ್ತಿಸುವುದು ಮತ್ತು ರಾಜ್ಯದ ಹಸಿರು ಹೊದಿಕೆಯನ್ನು ಹೆಚ್ಚಿಸುವ ಜೊತೆಗೆ ಗ್ರಾಮೀಣ ಆದಾಯವನ್ನು ವೃದ್ಧಿಸುವುದು ಈ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ.
ಸಂಪ್ರದಾಯಿಕ ಕುಂಬಾರಿಕೆಯಿಂದ ಸುಸ್ಥಿರ ಕೃಷಿಯೆಡೆಗೆ
ಮಹಂಗು ಅವರು ಕುಮ್ಹಾರ್ ಅಥವಾ ಕುಂಬಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ವಿವಾಹದ ನಂತರ, ಅವರು ತಮ್ಮ ಪತ್ನಿಯೊಂದಿಗೆ ಛತ್ತೀಸ್ಗಢದ ಜಶ್ಪುರ್ ಜಿಲ್ಲೆಯ ಧಂತೋಲಿ ಗ್ರಾಮಕ್ಕೆ ವಲಸೆ ಹೋದರು. ಜೀವನೋಪಾಯಕ್ಕಾಗಿ ಅವರು ಕುಂಬಾರಿಕೆಯನ್ನು ಆಯ್ದುಕೊಂಡರು. ಹಣದ ಬದಲಾಗಿ, ಗ್ರಾಹಕರು ಈ ದಂಪತಿಗೆ ವಸ್ತುಗಳ ರೂಪದಲ್ಲಿ ಪಾವತಿಸುತ್ತಿದ್ದರು.
“ಆ ಸಮಯದಲ್ಲಿ ವಸ್ತು ವಿನಿಮಯ ಪದ್ಧತಿ ಚಾಲ್ತಿಯಲ್ಲಿತ್ತು,” ಎಂದು ಭೂತ್ನಿ ದೇವಿ ಹೇಳುತ್ತಾರೆ. “ಜನರು ಮಡಕೆಗಳಿಗೆ ಪ್ರತಿಯಾಗಿ ನಮಗೆ ಭತ್ತವನ್ನು ನೀಡುತ್ತಿದ್ದರು. ಜೀವನ ಸರಳವಾಗಿತ್ತು, ಆದರೆ ನಾವು ಹೇಗೋ ನಿಭಾಯಿಸುತ್ತಿದ್ದೆವು.”
ವಯಸ್ಸಾಗುತ್ತಿದ್ದಂತೆ, ಕುಂಬಾರಿಕೆ ಕೆಲಸ ಕಷ್ಟಕರವಾಯಿತು. ಮಂದದೃಷ್ಟಿ ಮತ್ತು ದೈಹಿಕ ಶ್ರಮದಿಂದಾಗಿ ಆ ಕೆಲಸ ಸವಾಲಾಗತೊಡಗಿತು. ಇದರಿಂದಾಗಿ ಈ ದಂಪತಿ ತಮ್ಮ ಪೂರ್ವಜರ ಗ್ರಾಮವಾದ ಸಕ್ತರ್ಗೆ ಮರಳಲು ನಿರ್ಧರಿಸಿದರು. ಅಲ್ಲಿ ಮಹಂಗು ಅವರಿಗೆ ತಮ್ಮ ಕುಟುಂಬದ ಕಡೆಯಿಂದ ಬಂದ ಮೂರು ಎಕರೆ ಭೂಮಿ ಇತ್ತು.
ಇಬ್ಬರೂ ಸೇರಿ ಆ ಭೂಮಿಯಲ್ಲಿ ಭತ್ತ ಮತ್ತು ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದರು. ಆದರೆ ಅವರ ಜೀವನದಲ್ಲಿ ನಡೆದ ದುರಂತಗಳಿಂದ ಬದುಕು ದುಸ್ತರವಾಯಿತು. ಬೇರೆ ಬೇರೆ ಘಟನೆಗಳಲ್ಲಿ ಅವರ ಇಬ್ಬರು ಮೊಮ್ಮಕ್ಕಳು ಸಾವನ್ನಪ್ಪಿದರು — ಒಬ್ಬ ಸಿಡಿಲು ಬಡಿದು ಮರಣ ಹೊಂದಿದರೆ, ಮತ್ತೊಬ್ಬ ಹಿಂಸೆಗೆ ತಿರುಗಿದ ಕುಟುಂಬದ ಜಗಳವೊಂದರಲ್ಲಿ ಪ್ರಾಣ ಕಳೆದುಕೊಂಡ. ಇದರಿಂದಾಗಿ ಅವರ ಮರಿಮೊಮ್ಮಗನಾದ ಪರಮೇಶ್ವರ ಅಸಹಾಯಕ ಸ್ಥಿತಿಗೆ ತಳ್ಳಲ್ಪಟ್ಟ.

ಅಂತಹ ಕಠಿಣ ಪರಿಸ್ಥಿತಿಯಲ್ಲಿ, ಈ ದಂಪತಿ ತಮ್ಮ ಉಳಿದ ಜೀವನದ ವರ್ಷಗಳನ್ನು ಯಾವುದಾದರೊಂದು ಅರ್ಥಪೂರ್ಣ ಕೆಲಸಕ್ಕಾಗಿ ವಿನಿಯೋಗಿಸಬೇಕು ಎಂಬ ಪ್ರಜ್ಞಾಪೂರ್ವಕ ನಿರ್ಧಾರವನ್ನು ಕೈಗೊಂಡರು.
“ನಮ್ಮ ಕೈಯಲ್ಲಿ ಇನ್ನು ಎಷ್ಟು ದಿನಗಳಿವೆಯೋ ನಮಗೆ ತಿಳಿಯದು,” ಎನ್ನುತ್ತಾರೆ ಮಹಂಗು. “ಆದರೆ ನಾವು ಈಗ ಏನೇ ಮಾಡುತ್ತಿದ್ದರೂ, ಅದೆಲ್ಲವನ್ನೂ ನಮ್ಮ ಮರಿಮೊಮ್ಮಗನಿಗಾಗಿ ಮಾಡುತ್ತಿದ್ದೇವೆ.”
ಆ ಬದ್ಧತೆಯೇ ಹಣ್ಣಿನ ತೋಟದ ರೂಪ ತಾಳಿತು.
ದೀರ್ಘಾವಧಿಯ ಜೀವನೋಪಾಯ
ಫೌಂಡೇಷನ್ನ ʻಜೀವನೋಪಾಯಗಳುʼ ತಂಡದ ಮಾರ್ಗದರ್ಶನದಲ್ಲಿ ಮತ್ತು ಮನರೇಗಾ ಯೋಜನೆಯ ಬೆಂಬಲದೊಂದಿಗೆ, ಮಹಂಗು ಅವರು ಗುಂಡಿಗಳನ್ನು ಅಗೆಯುವುದು, ಸಸಿಗಳನ್ನು ನೆಡುವುದು, ನಿಯತವಾಗಿ ನೀರು ಹಾಕುವುದು ಮತ್ತು ಬೇಲಿ ಹಾಕುವ ಮೂಲಕ ತಮ್ಮ ಭೂಮಿಯನ್ನು ಮಾವಿನ ಹಣ್ಣಿನ ತೋಟವಾಗಿ ಪರಿವರ್ತಿಸಿದರು.
ಇಂದು, ಅವರ ಭೂಮಿಯಲ್ಲೆಲ್ಲಾ ಸಾಲು ಸಾಲಾಗಿ ಆರೋಗ್ಯಕರ ಮಾವಿನ ಸಸಿಗಳು ಗಟ್ಟಿಯಾಗಿ ಬೇರೂರಿ ನಿಂತಿವೆ. ಇವುಗಳ ಮಧ್ಯೆ, ದೈನಂದಿನ ಆಹಾರದ ಅಗತ್ಯವನ್ನು ಪೂರೈಸಲು ಮತ್ತು ಹೆಚ್ಚುವರಿ ಆದಾಯವನ್ನು ತಂದುಕೊಡಲು ಆಯಾ ಕಾಲಕ್ಕೆ ತಕ್ಕ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ವಿಶೇಷವೆಂದರೆ, ತೋಟದಲ್ಲಿ ಒಂದೇ ಒಂದು ಸಸಿಯೂ ಒಣಗಿಲ್ಲ — ಇದು ಅವರು ಸಸಿಗಳನ್ನು ಎಷ್ಟು ಜಾಗರೂಕತೆಯಿಂದ ಪೋಷಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಡಿಸೆಂಬರ್ ತಿಂಗಳ ಹಿತವಾದ ಕೋಮಲ ಬಿಸಿಲಿನಲ್ಲಿ, ಮಹಂಗು ಅವರು ಕೈಯಲ್ಲಿ ಗುದ್ದಲಿ ಹಿಡಿದು ಜಮೀನಿನಲ್ಲಿ ಗಿಡಗಳ ಸುತ್ತಲಿನ ಮಣ್ಣನ್ನು ಸಡಿಲಗೊಳಿಸುತ್ತಾ ಇರುವುದನ್ನು ನಾವು ಕಾಣಬಹುದು. ಅವರ ಪತ್ನಿ ಭೂತ್ನಿ ದೇವಿ ಮತ್ತು ಪುಟ್ಟ ಹುಡುಗ ಪರಮೇಶ್ವರ ಕಳೆಗಳನ್ನು ತೆಗೆಯುವ ಮೂಲಕ ಅವರಿಗೆ ಸಹಾಯ ಮಾಡುತ್ತಾರೆ.

ಅವರ ಆದಾಯವು ಹೇಳಿಕೊಳ್ಳುವಷ್ಟು ಇಲ್ಲದಿದ್ದರೂ ಸುಸ್ಥಿರವಾಗಿದೆ. ಮನೆಯ ದೈನಂದಿನ ಬಳಕೆಗೆ ಬೇಕಾದ ತರಕಾರಿಗಳನ್ನು ಒದಗಿಸುವ ಒಂದು ಸಣ್ಣ ಹಿತ್ತಲ ಕೈತೋಟ, ಹಾಲನ್ನು ಒದಗಿಸುವ ಒಂದು ಹಸು ಮತ್ತು ಭೂಮಿಯನ್ನು ಉಳಲು ಎರಡು ಎತ್ತುಗಳು ಇವರ ಬಳಿ ಇವೆ. ಇವರ ಒಂದೇ ಕೋಣೆಯ ಮಣ್ಣಿನ ಮನೆಯು ಅಡುಗೆಮನೆಯಾಗಿಯೂ, ಮಲಗುವ ಕೋಣೆಯಾಗಿಯೂ ಮತ್ತು ಧಾನ್ಯಗಳನ್ನು ಸಂಗ್ರಹಿಸಿಡುವ ಕೋಣೆಯಾಗಿಯೂ ಬಳಕೆಯಾಗುತ್ತಿದೆ.
ಈ ಹಣ್ಣಿನ ತೋಟವು ಕೇವಲ ಆದಾಯಕ್ಕಿಂತಲೂ ಮಿಗಿಲಾದ ಅತ್ಯಂತ ಅಮೂಲ್ಯವಾದದ್ದನ್ನು ನೀಡಿದೆ: ಅದು ಭದ್ರತೆ. ಮಾವಿನ ಮರಗಳು ದಶಕಗಳ ಕಾಲ ಫಲ ನೀಡುತ್ತಲೇ ಇರುತ್ತವೆ. ಮಹಂಗು ಮತ್ತು ಭೂತ್ನಿ ಅವರು ಈ ಲೋಕವನ್ನು ಬಿಟ್ಟು ಹೋದ ನಂತರವೂ, ಈ ತೋಟವು ಪರಮೇಶ್ವರನಿಗೆ ನಿರಂತರವಾಗಿ ಇಳುವರಿಯನ್ನು ನೀಡುತ್ತಿರುತ್ತದೆ ಮತ್ತು ಆದಾಯದ ಮೂಲವಾಗಿ ಮುಂದುವರಿಯುತ್ತದೆ.
ಸಮುದಾಯಕ್ಕೆ ಸ್ಫೂರ್ತಿ
“ಮಹಂಗು ಅವರ ಯಶಸ್ಸು ಇತರ ಹಲವು ಗ್ರಾಮಸ್ಥರಲ್ಲಿ ಹಣ್ಣಿನ ತೋಟದ ಅಭಿವೃದ್ಧಿಯ ಬಗ್ಗೆ ಆಸಕ್ತಿ ಮೂಡಿಸಿದೆ,” ಎಂದು ಜೀವನೋಪಾಯಗಳು ತಂಡದ ಸದಸ್ಯರೊಬ್ಬರು ಹೇಳುತ್ತಾರೆ. “ಅವರ ಶ್ರದ್ಧೆಯು ಯುವ ರೈತರನ್ನು ಉತ್ತೇಜಿಸಿದೆ.”
158 ಕುಟುಂಬಗಳಿರುವ ಈ ಗ್ರಾಮದಲ್ಲಿ, ಸುಸ್ಥಿರ ಆದಾಯವು ಯಾವಾಗಲೂ ಅನಿಶ್ಚಿತವಾಗಿದ್ದು ಮತ್ತು ಕೆಲಸಕ್ಕಾಗಿ ವಲಸೆ ಹೋಗುವುದು ಸಾಮಾನ್ಯವಾಗಿದ್ದಾಗ, ಈ ಹಣ್ಣಿನ ತೋಟವು ಸ್ಥಿರತೆಯ ಒಂದು ಚಿತ್ರಣವಾಗಿದೆ. ಸರ್ಕಾರಿ ಯೋಜನೆಗಳೊಂದಿಗೆ, ಸಮುದಾಯದ ಮಾರ್ಗದರ್ಶನ ಮತ್ತು ವೈಯಕ್ತಿಕ ದೃಢ ನಿರ್ಧಾರಗಳು ಮೇಳೈಸಿದಾಗ, ಸಣ್ಣ ಪ್ರಮಾಣದ ಭೂಮಿಯನ್ನು ದೀರ್ಘಾವಧಿಯ ಆಸ್ತಿಯಾಗಿ ಹೇಗೆ ಪರಿವರ್ತಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ನಾವು ಅಲ್ಲಿಂದ ಹೊರಡಲು ಸಿದ್ಧರಾಗುತ್ತಿದ್ದಂತೆ, ಮಹಂಗು ಅವರು ಮುಗುಳ್ನಗುತ್ತಾ, “ತೋಟದಲ್ಲಿ ಹೆಚ್ಚು ಹಣ್ಣು ಬಿಟ್ಟಿರುವ ಸಮಯದಲ್ಲಿ ಮತ್ತೆ ಬನ್ನಿ,” ಎಂದರು.
ಅವರ ಈ ಮಾತುಗಳಲ್ಲಿ ಕೇವಲ ಆಹ್ವಾನ ಮಾತ್ರವಿರಲಿಲ್ಲ; ಅದರಲ್ಲಿ ಭರವಸೆ ಕೂಡ ಇತ್ತು. ನಿಜಕ್ಕೂ, ಇದು ಅವರ ಕಠಿಣ ಪರಿಶ್ರಮಕ್ಕೆ ಸಂದ ಶ್ರಮದ ಫಲ.

