ಇವು ಪ್ರಾರಂಭವಾಗಿದ್ದು ಮಕ್ಕಳನ್ನು ನೋಡಿಕೊಳ್ಳುವ ಸ್ಥಳಗಳಾಗಿ. ಆದರೆ ಈಗ, ಈ ಬಾಲವಾಡಿಗಳು ಮಕ್ಕಳ ಪೌಷ್ಟಿಕ, ಮಾನಸಿಕ, ಬೌದ್ಧಿಕ ಮತ್ತು ದೈಹಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ಬಾಲವಾಡಿಯಲ್ಲಿ ಮಕ್ಕಳು ಪಾಲಕರ ಪ್ರೀತಿ ಮತ್ತು ಕಾಳಜಿಯಯಲ್ಲಿ ಸಂತೋಷದಿಂದ ಇರುತ್ತಾರೆ.
ಲೈಕಾ ಘರ್ನ ಸಿಬ್ಬಂದಿ ಮಕ್ಕಳ ಅಭಿವೃದ್ಧಿಯನ್ನು ಸತತವಾಗಿ ಪರಿಶೀಲಿಸುವುದಲ್ಲದೆ, ದತ್ತಾಂಶಗಳನ್ನು ಕೂಡ ದಾಖಲಿಸುತ್ತಾರೆ. ಜೊತೆಗೆ, ಅವರು ಪೋಷಕರು (parents) ಮತ್ತು ಪಾಲಕರಲ್ಲಿ (caregiver) ಮಕ್ಕಳ ಪೌಷ್ಟಿಕತೆ ಮತ್ತು ಆರಂಭಿಕ ಬಾಲ್ಯದ ಆರೈಕೆ ಹಾಗೂ ಅಭಿವೃದ್ಧಿಯ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಛತ್ತೀಸ್ಗಢದ ಲೈಕಾ ಘರ್ನ ಕೆಲಸ ಸ್ಥಳೀಯ ವಾಸ್ತವತೆ ಮತ್ತು ಅಗತ್ಯಗಳಿಗೆ ಹೊಂದಿಕೊಂಡಿದ್ದು, ಇದು ಯುವಕರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರೇರಣೆಯಾಗಿದೆ.
ಅಜೀಂ ಪ್ರೇಮ್ಜಿ ಫೌಂಡೇಷನ್ನ ಬಾಲವಾಡಿ ಉಪಕ್ರಮವು ಛತ್ತೀಸ್ಗಢ, ಬಿಹಾರ, ಝಾರ್ಖಂಡ್ ಮತ್ತು ಒಡಿಶಾದಲ್ಲಿ 25ಕ್ಕೂ ಹೆಚ್ಚು ಸಹವರ್ತಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ. ಈ ಬಾಲವಾಡಿಗಳಲ್ಲಿ ಪಾಲಕರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಪಾಲಕರ ಕೆಲಸವನ್ನು ಮೇಲ್ವಿಚಾರಕರು ನೋಡಿಕೊಳ್ಳುತ್ತಾರೆ. ಸೀಮಾ ಪ್ರಜಾಪತಿ ಅಂತಹ ಒಬ್ಬ ಮೇಲ್ವಿಚಾರಕರು. ಸೀಮಾ ಅವರು ಅಂಬಿಕಾಪುರದ ಹೋಲಿ ಕ್ರಾಸ್ ಮಹಿಳಾ ಕಾಲೇಜಿನಲ್ಲಿ ಮಾಸ್ಟರ್ ಆಫ್ ಸೋಶಿಯಲ್ ವರ್ಕ್ (MSW) ಪದವಿ ಪೂರ್ಣಗೊಳಿಸಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಇಂದು ಅವರು ದಂದ್ಗಾವ್ ಸೆಕ್ಟರ್ನಲ್ಲಿ ಕೆಲಸ ಮಾಡುತ್ತಿದ್ದು, ಏಳು ಲೈಕಾ ಘರ್ಗಳನ್ನು ನೋಡಿಕೊಳ್ಳುತ್ತಿದ್ದಾರೆ. “ನನಗೆ ಮುಂಚಿನಿಂದಲೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆ ಇತ್ತು. ನನಗೆ ಹೊಸದಾಗಿ ಏನಾದರೂ ಕಲಿಯಬೇಕೆಂಬ ಆಸೆಯೂ ಇತ್ತು. ಚೌಪಾಲ್ ಸಂಸ್ಥೆಯು ನನಗೆ ಈ ಅವಕಾಶ ನೀಡಿತು. ನನಗೆ ಬಿಲಾಸ್ಪುರದ ಜನ್ ಸ್ವಾಸ್ಥ್ಯ ಸಂಸ್ಥಾನದಲ್ಲಿ (JSS) ತರಬೇತಿ ನೀಡಲಾಯಿತು”, ಎನ್ನುತ್ತಾರೆ ಸೀಮಾ.

ಸೀಮಾ ಪ್ರಜಾಪತಿ, ಬಾಲವಾಡಿ ಮೇಲ್ವಿಚಾರಕರು
ತಮ್ಮ ಸುತ್ತಲೂ ಇದ್ದ ಹಲವು ಸಾಮಾಜಿಕ ಸಮಸ್ಯೆಗಳನ್ನು ನೋಡಿದ್ದ ಸೀಮಾ ಅವರಿಗೆ, ಪರಿಸ್ಥಿತಿಯನ್ನು ಬದಲಿಸಲು ಏನಾದರೂ ಮಾಡಬೇಕು ಎಂಬ ಹಂಬಲವೇ ಸಾಮಾಜಿಕ ಕ್ಷೇತ್ರವನ್ನು ಸೇರಲು ಪ್ರೇರಣೆಯಾಯಿತು. ಬಹುಶಃ ಅವರು ಧರ್ಮಜೈಗಢ ಬ್ಲಾಕ್ನ ಬೋರೋ ಗ್ರಾಮದ ಸಾಯಿ ಕುಟುಂಬದಂತಹ ಹಲವಾರು ಕುಟುಂಬಗಳನ್ನು ನೋಡಿದ್ದಿರಬಹುದು. ತಲುಪಲು ದುಸ್ತರವಾದ ಈ ಆದಿವಾಸಿ ಗ್ರಾಮದಲ್ಲಿ ಕನವರ್, ಮುಂಡಾ ಮತ್ತು ಬೈಗಾ ಸಮುದಾಯದವರು ವಾಸಿಸುತ್ತಿದ್ದು, ಅವರ ಜೀವನವು ಕಾಡು ಮತ್ತು ಕಾಡಿನ ಸಣ್ಣ ಪುಟ್ಟ ಉತ್ಪನ್ನಗಳನ್ನು ಅವಲಂಬಿಸಿದೆ. ಈ ಪ್ರದೇಶದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಲಭ್ಯತೆಯೂ ಕಡಿಮೆ. ಈ ಕಾರಣಗಳಿಂದಾಗಿ ಈ ಗ್ರಾಮವು ಅಪೌಷ್ಟಿಕತೆ ಸಮಸ್ಯೆಯನ್ನು ಎದುರಿಸುತ್ತಿದೆ. ಸಾಯಿ ಕುಟುಂಬದಂತಹ ಹಲವಾರು ಕುಟುಂಬಗಳ ಮಕ್ಕಳು ಈ ದುರದೃಷ್ಟ ಪರಿಸ್ಥಿತಿಯಿಂದ ಕಷ್ಟಕ್ಕೀಡಾಗಿದ್ದಾರೆ. ಏಳು ವರ್ಷದ ಯೂರೇಶ್ ಎಷ್ಟು ದುರ್ಬಲನಾಗಿದ್ದಾನೆಂದರೆ, ಅವನು ದಿನವಿಡೀ ಮಲಗಿಯೇ ಇರುತ್ತಾನೆ. ನಾಲ್ಕು ವರ್ಷದ ನರೇಶ್ ಕೂಡ ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದಾನೆ. ಎಲ್ಲರಿಗಿಂತ ಚಿಕ್ಕವಳಾದ ಅಲಿಷಾಗೆ ಕೇವಲ ಏಳು ತಿಂಗಳು. ಈ ಕುಟುಂಬವು ಕೂಲಿ ಮತ್ತು ಕಾಡಿನ ಉತ್ಪನ್ನಗಳನ್ನು ನಂಬಿ ಜೀವನ ಸಾಗಿಸುತ್ತಿದೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಸಾಯಿ ಕುಟುಂಬವು ಬಾಲವಾಡಿ ಕಾರ್ಯಕ್ರಮಕ್ಕೆ ಒಂದು ಪ್ರಮುಖವಾದ ಸವಾಲು ಮತ್ತು ಆದ್ಯತೆಯನ್ನು ಪ್ರತಿನಿಧಿಸುತ್ತದೆ
ಆಶ್ಚರ್ಯವೆಂದರೆ, ಸಾಯಿ ಕುಟುಂಬದವರು ತಮ್ಮ ಮಕ್ಕಳನ್ನು ಗ್ರಾಮದ ಲೈಕಾ ಘರ್ಗೆ ಕಳಿಸಲು ಇಷ್ಟಪಡುವುದಿಲ್ಲ. ಮಕ್ಕಳನ್ನು ಬಾಲವಾಡಿಯಲ್ಲಿ ಬಿಡಲು ಪ್ರಯತ್ನಿಸಿದಾಗ “ಅವರು ಅಳುತ್ತಾರೆ” ಎನ್ನುತ್ತಾರೆ ಸನ್ ಕನವಾರ್. ಇದರಿಂದ, ಮನೆಯನ್ನು ನೋಡಿಕೊಳ್ಳುವ ಜೊತೆಗೆ ಎರಡು ಗೂಳಿಗಳನ್ನು ಮೇಯಿಸಬೇಕಿರುವ ಈ ಯುವ ತಾಯಿಗೆ ಒತ್ತಡ ಹೆಚ್ಚಾಗುತ್ತದೆ.
ಸೀಮಾ ಅವರಂತಹ ಕಾರ್ಯಕರ್ತರು ಪೌಷ್ಟಿಕಾಂಶ ಕೊರತೆಯಷ್ಟೇ ಅಲ್ಲದೆ, ಪೋಷಕರು ಮತ್ತು ಪಾಲಕರಲ್ಲಿ ಇರುವ ಸಾಮಾಜಿಕ ನಂಬಿಕೆಗಳು ಮತ್ತು ಅರಿವಿನ ಕೊರತೆಯ ವಿರುದ್ಧವೂ ಹೋರಾಡಬೇಕಾಗುತ್ತದೆ ಎಂಬುದನ್ನು ಸನ್ ಕನವರ್ ಅವರ ಉತ್ತರವು ತೋರಿಸುತ್ತದೆ. ಈ ಹಿಂಜರಿಕೆಯ ನಡುವೆಯೂ, ಬಾಲವಾಡಿ ಕಾರ್ಯಕರ್ತರು ಇಂತಹ ಕುಟುಂಬಗಳೊಂದಿಗೆ ಸಂವಹನ ನಡೆಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಜನರ ನಂಬಿಕೆಯನ್ನು ಗಳಿಸುವುದು ಮತ್ತು ಬಾಲವಾಡಿ ವ್ಯವಸ್ಥೆಯತ್ತ ಒಲವು ಬೆಳೆಸುವುದು ಸುಲಭದ ಕೆಲಸವಲ್ಲ. ಈ ರೀತಿಯ ಕೆಲಸಕ್ಕೆ ತರಬೇತಿ ಅತ್ಯಗತ್ಯವಾಗುತ್ತದೆ. ತಮ್ಮ ತರಬೇತಿಯನ್ನು ನೆನಪಿಸಿಕೊಂಡು ಸೀಮಾ ಹೇಳುತ್ತಾರೆ, “ತರಬೇತಿಯ ನಂತರ, ತಕ್ಷಣವೇ ನಮ್ಮನ್ನು ನಮ್ಮ ಕಾರ್ಯಕ್ಷೇತ್ರಕ್ಕೆ ಕಳುಹಿಸಲಾಯಿತು. ನಾವು ಗ್ರಾಮಗಳನ್ನು ಸಮೀಕ್ಷೆ ಮಾಡಿ ಎಲ್ಲೆಲ್ಲಿ ಲೈಕಾ ಘರ್ಗಳನ್ನು ಸ್ಥಾಪಿಸಬೇಕು ಎಂದು ನಿರ್ಧರಿಸಬೇಕಿತ್ತು. ನಾನು ಹಿಂದೆ ಹಳ್ಳಿಗಳಲ್ಲಿ ಹೆಚ್ಚು ಸಮಯ ಕಳೆದಿರಲಿಲ್ಲವಾದ್ದರಿಂದ ಇದು ನನಗೆ ಹೊಸ ಅನುಭವವಾಗಿತ್ತು, ಆದರೆ ನಾನು ಪ್ರಯತ್ನಿಸಿದೆ. ನನ್ನ ಕುಟುಂಬದವರು ನನ್ನನ್ನು ಪ್ರೋತ್ಸಾಹಿಸಿದರು. ನನ್ನ ಸಂಭಾಷಣಾ ಶೈಲಿಯಿಂದ ಜನರು ನನ್ನೊಂದಿಗೆ ಸುಲಭವಾಗಿ ಮಾತನಾಡಲು ಸಹಾಯವಾಯಿತು.”
ಲೈಕಾ ಘರ್ನಂತಹ ಉಪಕ್ರಮಗಳು ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಗಳಾಗಿವೆ. ಆದರೆ ಈ ಪ್ರಯತ್ನಗಳು ಯಶಸ್ವಿಯಾಗಬೇಕಾದರೆ ಸ್ಥಳೀಯ ಪರಿಸ್ಥಿತಿಗಳು ಮತ್ತು ಸಮುದಾಯದ ಅಗತ್ಯಗಳನ್ನು ಪರಿಗಣಿಸಲೇಬೇಕು. ತಳ ಸ್ತರದಲ್ಲಿ ಕೆಲಸ ಆರಂಭಿಸಿದಾಗ, ಸೀಮಾ ಮತ್ತು ಅವರ ತಂಡವು ತಮ್ಮ ಕೆಲಸದ ನಿರ್ದಿಷ್ಟ ಅಗತ್ಯಗಳನ್ನು ತಿಳಿದುಕೊಂಡರು. ಕ್ರಮೇಣ, ಮೇಲ್ವಿಚಾರಕಿಯರು ಮತ್ತು ಪಾಲಕರು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು.
“ನಾವು ಮಕ್ಕಳಿಗೆ ದಿನಕ್ಕೆ ನಾಲ್ಕು ಬಾರಿ ಆಹಾರ ನೀಡುತ್ತೇವೆ ಮತ್ತು ಅವರಿಗೆ ಸಂತೋಷ ನೀಡುವಂತಹ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುತ್ತೇವೆ. ಜೊತೆಗೆ, ಅವರ ತೂಕ ಮತ್ತು ಎತ್ತರವನ್ನು ದಾಖಲಿಸುತ್ತೇವೆ. ದೀದಿಗಳಿಗೆ (ಪಾಲಕರಿಗೆ) ಅವರ ಕೆಲಸದಲ್ಲಿ ಸಹಾಯ ಮಾಡುವುದಲ್ಲದೆ, ಮಕ್ಕಳ ಪಾಲನೆಯ ಬಗ್ಗೆ ತರಬೇತಿ ನೀಡುತ್ತೇವೆ.”
– ಸೀಮಾ ಪ್ರಜಾಪತಿ
ಜನರು ತಮ್ಮ ಮಕ್ಕಳನ್ನು ಲೈಕಾ ಘರ್ಗೆ ಕಳುಹಿಸಲು ಆರಂಭಿಸಿದ್ದು ಯಶಸ್ಸಿನ ಮೊದಲ ಗುರುತಾಗಿತ್ತು. ಸ್ವಲ್ಪ ಸಮಯದಲ್ಲಿ, ತಮ್ಮ ಮಕ್ಕಳನ್ನು ಬಾಲವಾಡಿಗೆ ಕಳುಹಿಸುವುದರಿಂದ ಆಗುವ ಅನುಕೂಲಗಳ ಬಗ್ಗೆ ಗ್ರಾಮಸ್ಥರು ಮಾತನಾಡಲು ಪ್ರಾರಂಭಿಸಿದರು. ಇದರಿಂದ ಈ ಉಪಕ್ರಮದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿತು. “ನಾವು ಮಕ್ಕಳಿಗೆ ದಿನಕ್ಕೆ ನಾಲ್ಕು ಬಾರಿ ಆಹಾರ ನೀಡುತ್ತೇವೆ ಮತ್ತು ಅವರಿಗೆ ಸಂತೋಷ ನೀಡುವಂತಹ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುತ್ತೇವೆ. ಜೊತೆಗೆ, ಅವರ ತೂಕ ಮತ್ತು ಎತ್ತರವನ್ನು ದಾಖಲಿಸುತ್ತೇವೆ. ದೀದಿಗಳಿಗೆ (ಪಾಲಕರಿಗೆ) ಅವರ ಕೆಲಸದಲ್ಲಿ ಸಹಾಯ ಮಾಡುವುದಲ್ಲದೆ, ಮಕ್ಕಳ ಪಾಲನೆಯ ಬಗ್ಗೆ ತರಬೇತಿ ನೀಡುತ್ತೇವೆ”, ಎನ್ನುತ್ತಾರೆ ಸೀಮಾ.
ಗ್ರಾಮೀಣ ಬಾಲವಾಡಿಯು ಜನರ ಜೀವನವನ್ನು ಹಲವು ರೀತಿಗಳಲ್ಲಿ ಸುಲಭಗೊಳಿಸಿದೆ.
ಸುರ್ಗುಜಾ ಜಿಲ್ಲೆಯ ಸಾಲ್ಬಾ ಗ್ರಾಮದಿಂದ ಒಂದು ಯಶೋಗಾಥೆಯನ್ನು ನೋಡೋಣ.

ಸುರ್ಗುಜಾ ಜಿಲ್ಲೆಯ ಸಾಲ್ಬಾ ಗ್ರಾಮದಿಂದ ಒಂದು ಯಶೋಗಾಥೆಯನ್ನು ನೋಡೋಣ.
ತಮ್ಮ ಎರಡೂವರೆ ವರ್ಷದ ಮಗ ರಿಷಿಕೇಶ್ನನ್ನು ಲೈಕಾ ಘರ್ಗೆ ಬಿಡಲು ಬಂದಿದ್ದ ಲಲಿತಾ ಸಿಂಗ್ (29) ಅವರನ್ನು ನಾವು ಭೇಟಿಯಾದೆವು. “ನನ್ನ ಮಗ ಇಲ್ಲಿಗೆ ಬರಲು ಪ್ರಾರಂಭಿಸಿದಾಗಿನಿಂದ ಬಹಳ ಸಂತೋಷವಾಗಿದ್ದಾನೆ. ಇಲ್ಲಿ ಮಕ್ಕಳು ಹಲವಾರು ವಿಷಯಗಳನ್ನು ಕಲಿಯುತ್ತಾರೆ, ಮತ್ತು ಅವರು ಇಲ್ಲಿ ಇದ್ದಾಗ ನಾವು ನಮ್ಮ ಮನೆ ಕೆಲಸಗಳನ್ನು ಮುಗಿಸಬಹುದು ಅಥವಾ ಹೊರಗೆ ಹೋಗಬಹುದು. ಉದಾಹರಣೆಗೆ, ಭತ್ತದ ಕೊಯ್ಲಿನ ಸಮಯದಲ್ಲಿ ನಾವು ಚಿಂತೆ ಇಲ್ಲದೆ ಹೊಲದಲ್ಲಿ ಕೆಲಸ ಮಾಡಬಹುದು. ಲೈಕಾ ಘರ್ ನಮ್ಮ ಜೀವನವನ್ನು ತುಂಬಾ ಸುಲಭಗೊಳಿಸಿದೆ”, ಎಂದು ಲಲಿತಾ ಹೇಳಿದರು,
ಈ ಲೈಕಾ ಘರ್ನ ಸಿಬ್ಬಂದಿಗಳಾದ ಮೀನಾ ಸಿಂಗ್ ಮತ್ತು ನೀಲಂ ಸಿಂಗ್ ಸಂಪೂರ್ಣ ಸಮರ್ಪಣಾ ಮನೋಭಾವದಿಂದ ಮಕ್ಕಳನ್ನು ನೋಡಿಕೊಳ್ಳುತ್ತಾರೆ. “ನಾವು ಬೆಳಗ್ಗೆ ಎಂಟು ಗಂಟೆಗೆ ಇಲ್ಲಿ ಬರುತ್ತೇವೆ. ಸ್ಥಳವನ್ನು ಸ್ವಚ್ಛಗೊಳಿಸಿದ ನಂತರ ಮಕ್ಕಳನ್ನು ಸ್ವಾಗತಿಸುತ್ತೇವೆ. ನಾವು ಅವರಿಗೆ ಬಾರ್ಲಯ ಲಾಡು, ಮೊಟ್ಟೆ, ಕಿಚಡಿ ಮತ್ತು ಹಲ್ವಾ ಮುಂತಾದ ಪೌಷ್ಟಿಕ ಆಹಾರಗಳನ್ನು ತಯಾರಿಸುತ್ತೇವೆ. ಜೊತೆಗೆ, ಅವರ ಚಟುವಟಿಕೆಗಳ ಮೇಲೂ ಗಮನ ಇಡುತ್ತೇವೆ”, ಎನ್ನುತ್ತಾರೆ ಮೀನಾ.
ಸಿಬ್ಬಂದಿಯ ಶ್ರಮದ ಫಲವಾಗಿ, ಲೈಕಾ ಘರ್ ಈಗ ಪೋಷಕರ ಮತ್ತು ಮಕ್ಕಳ ಕುಟುಂಬಗಳ ನಂಬಿಕೆ ಮತ್ತು ವಿಶ್ವಾಸವನ್ನು ಗಳಿಸಿದೆ. ಮೊದಲು ಮಕ್ಕಳನ್ನು ಕಳುಹಿಸಲು ಪೋಷಕರನ್ನು ಒಪ್ಪಿಸುವುದು ಒಂದು ಸವಾಲಾಗಿತ್ತು. ಈಗ, ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಮಕ್ಕಳನ್ನು ನೋಡಿಕೊಳ್ಳುವ ಬಾಲವಾಡಿಗಳಿಗೆ ಜನರು ತಾವಾಗಿಯೇ ಬರುತ್ತಾರೆ. ಹಲವೆಡೆ, ಗ್ರಾಮೀಣ ಬಾಲವಾಡಿಗಳಿಗೆ ಹೆಚ್ಚಿನ ನೆರವನ್ನು ಒದಗಿಸಲು ಗ್ರಾಮ ಪಂಚಾಯತಿಯ ಕಾರ್ಯದರ್ಶಿಗಳು ಮತ್ತು ಅಧ್ಯಕ್ಷರ ಸಹಾಯವನ್ನೂ ಪಡೆಯಲಾಗಿದೆ.
ಈ ಕೆಲಸ ಆರಂಭದಲ್ಲಿ ತಮಗೆ ಇಷ್ಟವಾಗಲಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ ಸೀಮಾ. “ನನಗೆ ಮಕ್ಕಳೊಂದಿಗೆ ಕೆಲಸ ಮಾಡುವುದರಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ, ಆದರೆ ನಾನು ಈ ಕೆಲಸವನ್ನು ಅರ್ಥಮಾಡಿಕೊಂಡು ಮತ್ತು ಸ್ವಲ್ಪ ಅನುಭವ ಪಡೆದುಕೊಂಡ ನಂತರ ನನಗೆ ಇದು ಇಷ್ಟವಾಗಲು ಆರಂಭವಾಯಿತು. ಈಗ, ಮಕ್ಕಳೊಂದಿಗೆ ಸಮಯ ಕಳೆಯುವುದು ಮತ್ತು ಅವರ ಬೆಳವಣಿಗೆಗೆ ನೆರವಾಗುವುದು ನನಗೆ ಅಪಾರ ತೃಪ್ತಿಯನ್ನು ನೀಡುತ್ತದೆ.”
“ಹಿಂದೆ ನಾನು ಗ್ರಾಮಗಳಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿದ್ದೆ, ಆದರೆ ಈಗ ನನಗೆ ಯಾವುದೇ ತೊಂದರೆ ಇಲ್ಲ. ನಾನು ಜನರೊಂದಿಗೆ ಬೆರೆತಿದ್ದೇನೆ. ನನಗೆ ಈ ಕೆಲಸ ಬಹಳ ಇಷ್ಟ.”
– ಸೀಮಾ ಪ್ರಜಾಪತಿ
ಸೀಮಾ ಈಗ ಆತ್ಮವಿಶ್ವಾಸದಿಂದ ಹೇಳುತ್ತಾರೆ: “ಹಿಂದೆ ನಾನು ಗ್ರಾಮಗಳಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿದ್ದೆ, ಆದರೆ ಈಗ ನನಗೆ ಯಾವುದೇ ತೊಂದರೆ ಇಲ್ಲ. ನಾನು ಜನರೊಂದಿಗೆ ಬೆರೆತಿದ್ದೇನೆ. ನನಗೆ ಈ ಕೆಲಸ ಬಹಳ ಇಷ್ಟ”. ಲೈಕಾ ಘರ್, ಮಕ್ಕಳ ಮತ್ತು ಅವರ ಪೋಷಕರ ಜೀವನವನ್ನು ಮಾತ್ರ ಬದಲಾಯಿಸಿಲ್ಲ; ಅದು ಸೀಮಾ ಅವರಂತಹ ಯುವ ಮಹಿಳೆಯರನ್ನು ಸ್ವಾವಲಂಬಿಗಳಾಗಿಸಿದೆ.
ಈ ಕಥೆಯು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಏನಾದರೂ ಮಾಡಬೇಕೆಂಬ ಇಚ್ಛೆ ಹೊಂದಿರುವ ಎಲ್ಲರಿಗೂ ಒಂದು ಪ್ರೇರಣೆ. ಬಾಲವಾಡಿಯು ಮಕ್ಕಳಿಗೆ ಉತ್ತಮ ಪೌಷ್ಟಿಕತೆ ಮತ್ತು ಸಂತೋಷದ ಪ್ರತೀಕವಾಗಿದ್ದು, ಪೋಷಕರಿಗೆ ನಂಬಿಕೆ ಮತ್ತು ವಿಶ್ವಾಸದ ಒಂದು ಸ್ಥಳವಾಗಿದೆ.
ಲೇಖಕರ ಬಗ್ಗೆ
ಪುರುಷೋತ್ತಮ್ ಠಾಕೂರ್ ಅವರು ಅಜೀಂ ಪ್ರೇಮ್ಜಿ ಫೌಂಡೇಷನ್ನ ಕಮ್ಯುನಿಕೇಷನ್ ಫಂಕ್ಷನ್ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ.
ಮೊಬಿನ್ ಜಹೊರೊದ್ದೀನ್ ಅವರು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ಚಿತ್ರಗಳು: ಪುರುಷೋತ್ತಮ್ ಸಿಂಗ್ ಠಾಕೂರ್
